ಕೋಲ್ಕತ್ತಾ(ಜ.05): ಟಿಎಂಸಿ ಶಾಸಕ ಹಾಗೂ ಸಚಿವ ಲಕ್ಷ್ಮೀ ರತನ್ ಶುಕ್ಲಾ ಪಶ್ಚಿಮ ಬಂಗಾಳದ ಮಮತಾ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಪಕ್ಷದ ಅನೇಕ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಿರುವಾಗಲೇ 39 ವರ್ಷದ ಶುಕ್ಲಾ ಕ್ರೀಡಾ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಮಮತಾ ನೇತೃತ್ವದ ಟಿಎಂಸಿಗೆ ಬಿಜೆಪಿಯು ಪ್ರಬಲ ಸ್ಪರ್ಧೆಯೊಡ್ಡಿದೆ. ಸುವೇಂದು ಅಧಿಕಾರಿಯಂತಹ ಹಿರಿಯ ನಾಯಕರು ಬಿಜೆಪಿ ಸೇರಿರುವುದರಿಂದ ದೀದೀಗೆ ಮತ್ತಷ್ಟು ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣೆ ವೇಳೆಗೆ ದೀದೀ ಏಕಾಂಗಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದಾರೆ.

ಇನ್ನು ಸುದ್ದಿ ಸಂಸ್ಥಡ ಪಿಟಿಐ ಟಿಎಂಸಿ ನಾಯಕ ಹಾಗೂ ಪಶ್ಚಿಮ ಬಂಗಾಳದ ಸಚಿವ ಲಕ್ಷ್ಮೀ ರತನ್ ಶುಕ್ಲಾ ರಾಜೀನಾಮೆ ನೀಡಿದ್ದಾರೆಂದು ವರದಿ ಮಾಡಿದೆ. ಇದರ ಒಂದು ಪ್ರತಿ ರಾಜ್ಯಪಾಲ ಜಗದೀಪ್ ದನ್ಖಡೆಗೂ ನೀಡಿದ್ದಾರೆನ್ನಲಾಗಿದೆ. ಕ್ರಿಕೆಟರ್ ಆಗಿದ್ದ ಲಕ್ಷ್ಮೀಯವರ ರಾಜೀನಾಮೆಗೂ ಮೊದಲು ಟಿಎಂಸಿಯ ಪ್ರಭಾವಿ ನಾಯಕರಾಗಿದ್ದ ಸುವೇಂಧು ರಾಜೀನಾಮೆ ನಿಡಿ ಬಿಜೆಪಿ ಸೇರ್ಪಡೆಯಾಗಿದ್ದರು.