ಕೋಲ್ಕತ್ತಾ(ಜು.26): ತಪ್ಪು ಮಾಡಿದ ಗಂಡನಿಗೆ ಹೆಂಡತಿ ಬುದ್ಧಿಕಲಿಸುವುದು ಮಾಮೂಲಿ. ಕೆಲವೊಮ್ಮೆ ಸಿಟ್ಟು ನೆತ್ತಿಗೇರಿದರೆ ಲಟ್ಟಣಿಕೆ, ಪೊರಕೆ ಕೈಗೆ ಬರುತ್ತದೆ. ಆದರೆ, ಅಷ್ಟಕ್ಕೇ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವುದುಂಟೇ?

ಆದರೆ, ಪಶ್ಚಿಮ ಬಂಗಾಳದ ಅಲಿಪುರುದರ್‌ ಜಿಲ್ಲೆಯ ಸೌಮಿತ್ರ ಅಧಿಕಾರಿ ಎಂಬಾತ ಹೆಂಡತಿ ಮತ್ತು ಅತ್ತೆಯಿಂದ ಪೊರಕೆ ಏಟು ತಿಂದಿದ್ದಕ್ಕೆ ಅವಮಾನ ತಾಳಲಾರದೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗಳನ್ನು ನೋಡುವುದಕ್ಕೆಂದು ಅತ್ತೆ ಮನೆಗೆ ಹೋದಾಗ ಜಗಳ ಏರ್ಪಟ್ಟು, ಹೆಂಡತಿ ಮತ್ತು ಅತ್ತೆ ಪೊರಕೆ ಸೇವೆ ಮಾಡಿದ್ದರು. ಈ ಸಂಗತಿಯನ್ನು ತನ್ನ ತಾಯಿಗೆ ಹೇಳಿದ ಆತ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇಷ್ಟಕ್ಕೆಲ್ಲಾ ಹೆಣ್ಣಿನ ಮನೆಯವರೇ ಕಾರಣ ಎಂದು ಮೃತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.