Asianet Suvarna News Asianet Suvarna News

ಚೀನಾದಿಂದ ಹೊರ ನಡೆವ ಕಂಪನಿ ಸೆಳೆಯಲು ಮೋದಿ ಕಾರ‍್ಯತಂತ್ರ

ಚೀನಾದಿಂದ ಹೊರನಡೆಯುವ ಕಂಪನಿಗಳನ್ನು ಭಾರತಕ್ಕೆ ಸೆಳೆಯಲು ಪ್ರಧಾನಿ ಮೋದಿ ಸಿದ್ಧತೆ ಆರಂಭಿಸಿದ್ದಾರೆ. ವಿದೇಶಿ ಬಂಡವಾಳ ಆಕರ್ಷಣೆಗೆ ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲೇ ಇತ್ತ ತಮಿಳುನಾಡು ಸರ್ಕಾರ ಕೂಡಾ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Be ready to woo companies quitting China PM Modi says to senior officials
Author
New Delhi, First Published May 1, 2020, 2:21 PM IST

ನವದೆಹಲಿ(ಮೇ.01): ಚೀನಾದಲ್ಲಿನ ಕೊರೋನಾ ಹೊಡೆತಕ್ಕೆ ತತ್ತರಿಸಿರುವ ಹಲವು ಜಾಗತಿಕ ಕಂಪನಿಗಳು ಅಲ್ಲಿಂದ ಹೊರನಡೆಯಲು ಸಿದ್ಧತೆ ನಡೆಸಿರುವ ಹಂತದಲ್ಲೇ, ಅಂತಹ ಕಂಪನಿಗಳನ್ನು ಭಾರತಕ್ಕೆ ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಹತ್ವದ ಸಭೆ ನಡೆಸಿದರು.

ವಿವಿಧ ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳ ಜೊತೆ ವಿದೇಶಿ ಬಂಡವಾಳ ಆಕರ್ಷಿಸಲು ರೂಪಿಸಬೇಕಾದ ಕಾರ್ಯತಂತ್ರಗಳು ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಸಮಗ್ರ ಚರ್ಚೆ ನಡೆಸಿದರು. ಜೊತೆಗೆ ಸ್ಥಳೀಯವಾಗಿ ಬಂಡವಾಳ ಹೂಡಿಕೆ ಹೆಚ್ಚಳದ ಮೂಲದ ಆರ್ಥಿಕತೆಗೆ ಒತ್ತು ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಚೀನಾದಲ್ಲೇ ತಮ್ಮ ಘಟಕಗಳನ್ನು ಹೊಂದಿರುವ ಜಾಗತಿಕ ಕಂಪನಿಗಳು, ಕೊರೋನಾ ಬಿಕ್ಕಟ್ಟು ಎದುರಾದ ಬಳಿಕ ತಮ್ಮ ಇಡೀ ವಹಿವಾಟನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಹೀಗಾಗಿ ಅವು ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆಗೆ ನಿರ್ಧರಿಸಿದ್ದು, ಉದ್ಯಮವನ್ನು ಒಂದೋ ಅಲ್ಲಿಂದ ಸ್ಥಳಾಂತರಿಸುವ ಇಲ್ಲವೇ ಒಂದಿಷ್ಟುಭಾಗವನ್ನು ಭಾರತದಂಥ ದೇಶಗಳಿಗೆ ಬದಲಾಯಿಸುವ ಚಿಂತನೆಯಲ್ಲಿವೆ. ಇದಕ್ಕೆ ಪೂರಕವೆಂಬಂತೆ ಅಮೆರಿಕದ ಕಂಪನಿಗಳು ಭಾರತದಲ್ಲಿ ತಮ್ಮ ನೆಲೆ ತೆರೆಯಲು ಸ್ವತಃ ಅಮೆರಿಕ ಸರ್ಕಾರವೇ ಬಹಿರಂಗ ಬೆಂಬಲ ಸೂಚಿಸಿದೆ. ಹೀಗಾಗಿ ಈ ಅವಕಾಶ ಸದುಪಯೋಗಪಡಿಸಿಕೊಂಡು, ಚೀನಾದಲ್ಲಿನ ಕಂಪನಿಗಳನ್ನು ಭಾರತಕ್ಕೆ ಸೆಳೆಯುವುದು ಗುರುವಾರದ ಸಭೆಯ ಮುಖ್ಯ ಉದ್ದೇಶವಾಗಿತ್ತು ಎನ್ನಲಾಗಿದೆ.

ಮೂರನೇ ಲಾಕ್‌ಡೌನ್ ವಿಸ್ತರಣೆ ಫಿಕ್ಸ್ ಆದ್ರೆ ಹಲವೆಡೆ ರಿಲಾಕ್ಸ್..!

ಹೊಸ ಬಂಡವಾಳ ಆಕರ್ಷಣೆ ಜೊತೆಗೆ, ಈಗಾಗಲೇ ವಿವಿಧ ಸಚಿವಾಲಯಗಳು ಕೈಗೊಂಡಿರುವ ಸುಧಾರಣಾ ಕ್ರಮಗಳು ಯಾವುದೇ ಅಡ್ಡಿ ಇಲ್ಲದೆ ಮುಂದುವರೆಯಬೇಕು, ಅವುಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು, ಅದಕ್ಕೆ ಎದುರಾಗಬಹುದಾದ ಯಾವುದೇ ಅಡ್ಡಿಗಳನ್ನು ನಿವಾರಿಸಬೇಕು. ಹಾಲಿ ಇರುವ ಜಾಗ ಮತ್ತು ಮೂಲಸೌಕರ್ಯದಲ್ಲೇ ಹೊಸ ಕಂಪನಿಗಳು ತೆರೆಯಲು ಅನುವಾಗುವಂತೆ ವಿಶೇಷ ಯೋಜನೆ ರೂಪಿಸಬೇಕು. ಅವುಗಳಿಗೆ ಅಗತ್ಯವಾದ ಬಂಡವಾಳದ ನೆರವು ಕಲ್ಪಿಸಬೇಕು ಎಂದು ಸಚಿವರು ಮತ್ತು ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚಿಸಿದರು ಎನ್ನಲಾಗಿದೆ.

ಇದಲ್ಲದೆ ಹೂಡಿಕೆದಾರ ಸ್ನೇಹಿಯಾಗಿ ಅಧಿಕಾರಿಗಳು ನಡೆದುಕೊಳ್ಳಬೇಕು. ಅವರ ಸಮಸ್ಯೆಗಳನ್ನು ಆಲಿಸಿ, ಕಾಲಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿವಿಧ ಅನುಮತಿ ಪಡೆಯಲು ಸಹಾಯ ಮಾಡಬೇಕು ಎಂದೂ ಪ್ರಧಾನಿ ಸೂಚಿಸಿದರು. ಅಲ್ಲದೆ ಸಭೆಯಲ್ಲಿ ವಿದೇಶಿ ಬಂಡವಾಳ ಆಕರ್ಷಿಸಲು ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಸುವ ಮತ್ತು ಅವುಗಳಿಗೆ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಕಾರ್ಯಪಡೆ ರಚನೆ:

ಅತ್ತ ವಿದೇಶಿ ಬಂಡವಾಳ ಆಕರ್ಷಣೆಗೆ ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲೇ ಇತ್ತ ತಮಿಳುನಾಡು ಸರ್ಕಾರ ಕೂಡಾ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿದೆ. ಮುಖ್ಯ ಕಾರ್ಯದರ್ಶಿ ಕೆ.ಷಣ್ಮುಂಗ ನೇತೃತ್ವದಲ್ಲಿ ರಚಿಸಲಾಗಿರುವ ಈ ಕಾರ್ಯಪಡೆ, ಜಪಾನ್‌, ದಕ್ಷಿಣ ಕೊರಿಯಾ, ಸಿಂಗಾಪುರ, ತೈವಾನ್‌, ಅಮೆರಿಕ ಮೊದಲಾದ ದೇಶಗಳಿಂದ ಬಂಡವಾಳ ಆಕರ್ಷಿಸಲು ಕಾರ್ಯತಂತ್ರ ರೂಪಿಸಲಿದೆ.
 

Follow Us:
Download App:
  • android
  • ios