ಬೆಂಗಳೂರು: ಈ ಬಾರಿ ಬಿಬಿಎಂಪಿ ಬಜೆಟ್ ಬರೀ 5,000 ಕೋಟಿ ರೂ..?
ಹೀಗಾಗಿ 5 ಸಾವಿರ ಕೋಟಿಗಳ ಬಜೆಟನ್ನು ಕೇವಲ ಪಾಲಿಕೆ ನಿರ್ವಹಣೆ ವೆಚ್ಚ ಅನುಷ್ಠಾನಗೊಳಿಸಲು ಮಂಡಿಸುವ ಉದ್ದೇಶ ಹೊಂದಲಾಗಿದೆ. ಇದರಿಂದಾಗಿ ಬಿಬಿಎಂಪಿಯ ಆರ್ಥಿಕತೆ ಪ್ರಗತಿಯಾಗುತ್ತದೆ ಎಂದ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ
ಬೆಂಗಳೂರು(ಡಿ.13): 2023-24ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಬಜೆಟ್ ಗಾತ್ರವನ್ನು ಕಡಿಮೆ ಮಾಡಲು ಚಿಂತನೆ ನಡೆದಿದ್ದು, 5 ಸಾವಿರ ಕೋಟಿ ವೆಚ್ಚದ ವಾಸ್ತವ ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಸೋಮವಾರ ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಬಿಬಿಎಂಪಿಗೆ ಆಸ್ತಿ ತೆರಿಗೆ ಪ್ರಮುಖ ಆದಾಯ ಮೂಲವಾಗಿದ್ದು, ಈ ಬಾರಿ ಸರಿಸುಮಾರು 4 ಸಾವಿರ ಕೋಟಿ ಸಂಗ್ರಹವಾಗಿದೆ. ಅಲ್ಲದೇ ಬಿಬಿಎಂಪಿಯ ಪ್ರಮುಖ ಹೊಸ ಕಾಮಗಾರಿಗಳು ಅಥವಾ ಯೋಜನೆಗಳನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಮಾಡಲಾಗುವುದು. ಹೀಗಾಗಿ 5 ಸಾವಿರ ಕೋಟಿಗಳ ಬಜೆಟನ್ನು ಕೇವಲ ಪಾಲಿಕೆ ನಿರ್ವಹಣೆ ವೆಚ್ಚ ಅನುಷ್ಠಾನಗೊಳಿಸಲು ಮಂಡಿಸುವ ಉದ್ದೇಶ ಹೊಂದಲಾಗಿದೆ. ಇದರಿಂದಾಗಿ ಬಿಬಿಎಂಪಿಯ ಆರ್ಥಿಕತೆ ಪ್ರಗತಿಯಾಗುತ್ತದೆ ಎಂದರು.
BBMP Budget: ಬಿಬಿಎಂಪಿಯ ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಚಾಲನೆ
ಈ ಹಿಂದೆ ರಾಜ್ಯ ಸರ್ಕಾರದಿಂದ .400 ಕೋಟಿ ಅನುದಾನವನ್ನು ಬಿಬಿಎಂಪಿಗೆ ಕೊಡುತ್ತಿದ್ದರು. ಆದರೆ ಹಿಂದಿನ ವರ್ಷ .200 ಕೋಟಿ ಮಾತ್ರ ಬಿಡುಗಡೆ ಮಾಡಿದ್ದರು. ಇಷ್ಟುಹಣ ಸಾಲುವುದಿಲ್ಲ, ಇನ್ನೂ ಹೆಚ್ಚಿನ ಅನುದಾನ ಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸು ಇಲಾಖೆಯೂ ಒಪ್ಪಿಕೊಂಡಿತ್ತು. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ, ಬೀದಿ ದೀಪದ ನಿರ್ವಹಣೆಗೆಂದು .80 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ .150 ಕೋಟಿ ಹೀಗೆ ರಾಜ್ಯ ಸರ್ಕಾರದಿಂದ ಒಟ್ಟು .500 ಕೋಟಿಗಿಂತ ಕಡಿಮೆಯೇ ಅನುದಾನ ಬರುತ್ತಿದೆ. ಆದರೆ, ಬಿಬಿಎಂಪಿಯ ಅಭಿವೃದ್ಧಿ ಕಾರ್ಯಗಳು ರಾಜ್ಯದ ಅನುದಾನದಲ್ಲಿ ಆಗುತ್ತಿವೆ ಎಂದು ಹೇಳಿದರು.
ಘನತ್ಯಾಜ್ಯ ನಿರ್ವಹಣೆ .1500 ಕೋಟಿ, ರಸ್ತೆ ನಿರ್ವಹಣೆಗೆ ಅಂದಾಜು .1200 ಕೋಟಿ, ಅಧಿಕಾರಿ, ನೌಕರ ಸಿಬ್ಬಂದಿ ಸಂಬಳ ಇನ್ನಿತರೆ ವೆಚ್ಚ 800ರಿಂದ 850 ಕೋಟಿ, ಶಿಕ್ಷಣ ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳಿಗಾಗಿ .1200 ಕೋಟಿ ಆಗುತ್ತದೆ. ಹೀಗೆ ಒಟ್ಟು ಲೆಕ್ಕಾಚಾರದಲ್ಲಿ ಅಂದಾಜು .5 ಸಾವಿರ ಕೋಟಿ ಆಗುತ್ತದೆ. ಆದ್ದರಿಂದ .5 ಸಾವಿರ ಕೋಟಿ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ ಎಂದರು.
350 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಕ್ರಮ
ಬೆಸ್ಕಾಂ ಮ್ಯಾಪಿಂಗ್‌ನಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರನ್ನು ಗುರುತಿಸಿದರೆ, 20 ಸಾವಿರ ಆಸ್ತಿ ಸಿಗುತ್ತದೆ. ಶೇ.60ರಿಂದ 65ರಷ್ಟುವಸತಿಗೆಂದು ಘೋಷಣೆ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ. ಅದನ್ನು ವಾಣಿಜ್ಯಕ್ಕೆ ವರ್ಗಾಯಿಸಿದರೆ, ತೆರಿಗೆ ಹೆಚ್ಚುವ ಸಾಧ್ಯತೆ ಇದ್ದು, ಇದರಿಂದ 300ರಿಂದ 350 ಕೋಟಿ ಹೆಚ್ಚುವರಿಯಾಗಿ ತೆರಿಗೆ ಸಂಗ್ರಹವಾಗಲಿದೆ. ಅದಕ್ಕಾಗಿ ಕ್ರಮಕೈಗೊಳ್ಳಲಾಗಿದೆ ಎಂದು ಜಯರಾಮ್ ರಾಯಪುರ ತಿಳಿಸಿದರು.