ಬನ್ನೇರುಘಟ್ಟ ಮೃಗಾಲಯದ ಲಾರಿ ಪಲ್ಟಿ; ಜನವಸತಿ ಪ್ರದೇಶಕ್ಕೆ ನುಗ್ಗಿದ ಮೊಸಳೆಗಳು!
ಮೃಗಾಲಯಕ್ಕೆ ಹುಲಿಗಳನ್ನು ಒಳಗೊಂಡಂತೆ ವನ್ಯಪ್ರಾಣಿಗಳನ್ನು ಸಾಗಿಸುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಯಿತು. ಪಂಜರದಿಂದ ತಪ್ಪಿಸಿಕೊಂಡ ಮೊಸಳೆಗಳು.
ಹೈದರಾಬಾದ್ (ಅ.18): ಬಿಹಾರದ ಪಾಟ್ನಾದ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ ಕರ್ನಾಟಕದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗುತ್ತಿದ್ದ 2 ಬಿಳಿ ಹುಲಿಗಳು, 8 ಮೊಸಳೆಗಳು ಸೇರಿದಂತೆ ವಿವಿಧ ಪ್ರಾಣಿಗಳನ್ನು ತರುತ್ತಿದ್ದ ಲಾರಿಯು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ತೆಲಂಗಾಣದ ಹಳ್ಳಿಯೊಂದರ ಬಳಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿದೆ. ಬಹುತೇಕ ಪ್ರಾಣಿಗಳು ಬೋನಿನಿಂದ ತಪ್ಪಿಸಿಕೊಂಡಿದ್ದವು. ಎಲ್ಲ ಪ್ರಾಣಿಗಳನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದು, ಅದರಲ್ಲಿ ಕೆಲವು ಮೊಸಳೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿದ್ದು, ಜನರಲ್ಲಿ ಆತಂಕ ಶುರುವಾಗಿದೆ.
ಬಿಹಾರದ ಪಾಟ್ನಾದಿಂದ ಕರ್ನಾಟಕದ ಮೃಗಾಲಯಕ್ಕೆ ಪ್ರಾಣಿಗಳನ್ನು ಸ್ಥಳಾಂತರಿಸಲಾಗುತ್ತಿತ್ತು. ಮೃಗಾಲಯದಿಂದ ಪ್ರಾಣಿಗಳನ್ನು ಸ್ಥಳಾಂತರಿಸುವಾಗ ತೆಲಂಗಾಣದ ಮೊಂಡಿಗುಟ್ಟ ಹಳ್ಳಿಯ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಲಾರಿ ಪಲ್ಟಿಯಾಗಿದೆ. ಈ ಅಪಘಾತದಿಂದ ಬೋನಿನಿಂದ ಪಾರಾದ ಮೊಸಳೆಗಳು ಸ್ಥಳೀಯ ಜನವಸತಿ ಪ್ರದೇಶಕ್ಕೆ ಮೊಸಳೆಗಳು ನುಗ್ಗಿದ್ದು, ಇದೀಗ ಜನರಲ್ಲಿ ಆತಂಕ ಶುರುವಾಗಿದೆ. ಇನ್ನು ಮಕ್ಕಳನ್ನು ರಾತ್ರಿ ವೇಳೆ ಮನೆಯಿಂದ ಹೊರಗೆ ಕಳಿಸದಂತೆ ಹಾಗೂ ರೈತರು ಒಬ್ಬಂಟಿಯಾಗಿ ಹೊಲಗಳ ಕಡೆಗೆ ಹೋಗದಂತೆ ಎಚ್ಚರಿಕೆಯನ್ನು ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರೀತ್ಸೆ ಅಂತಾ ಪ್ರಾಣ ತಿಂದ ಪ್ರೇಮಿ: ಪ್ರೀತ್ಸೋಕ್ ಇಷ್ಟವಿಲ್ಲದೇ ಪ್ರಾಣಬಿಟ್ಟ ಯುವತಿ ಪ್ರೇಮಾ!
ಲಾರಿಯನ್ನು ಅತಿವೇಗದಲ್ಲಿ ಚಲಿಸುತ್ತಿದ್ದರಿಂದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಪಲ್ಟಿಯಾಗಿದೆ. ಗುರುವಾರ ಸಂಜೆ ವೇಳೆ ಈ ಅಪಘಾತ ಸಂಭವಿಸಿದೆ. ನಿರ್ಮಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಾರಿಯ ಪಂಜರದಲ್ಲಿ ಎಂಟು ಮೊಸಳೆಗಳಿದ್ದವು. ಅಪಘಾತದ ನಂತರ ಎರಡು ಮೊಸಳೆಗಳು ಸಮೀಪದ ಜನವಸತಿ ಪ್ರದೇಶಗಳಿಗೆ ನುಗ್ಗಿವೆ. ಹುಲಿಗಳು ಒಳಗೊಂಡಂತೆ ಇತರ ಪ್ರಾಣಿಗಳು ಪಂಜರದಲ್ಲಿ ಸಿಲುಕಿಕೊಂಡಿದ್ದವು.
ಇನ್ನು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಮತ್ತು ಸ್ಥಳೀಯರು ಮೊಸಳೆಗಳನ್ನು ಹಿಡಿದಿದ್ದಾರೆ. ಇವುಗಳನ್ನು ಮತ್ತೊಂದು ವಾಹನದಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಲಾಯಿತು. ಪಾಟ್ನಾದ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ ಪ್ರಾಣಿಗಳನ್ನು ಸಾಗಿಸುತ್ತಿದ್ದ ಲಾರಿಯ ಅಪಘಾತಕ್ಕೆ ಸಂಬಂಧಿಸಿದಂತೆ ಚಾಲಕ ಪಶ್ಚಿಮ ಬಂಗಾಳದ ಸಾಂಕ್ಪುರ್ ನಿವಾಸಿ ಅಬ್ದುಲ್ ಮನ್ನಾನ್ ಮಂಡಲ್ (51) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ವಲಸಿಗರಿಗೆ ಪೌರತ್ವ ನೀಡಲು ಸುಪ್ರೀಂ ಸಮ್ಮತಿ
ಅತಿವೇಗದಲ್ಲಿ ವಾಹನ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ನಿರ್ಮಲ್ ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ಜಾನಕಿ ಶರ್ಮಿಳ ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡು ಲಾರಿಗಳಲ್ಲಿ ಪ್ರಾಣಿಗಳನ್ನು ಕರ್ನಾಟಕಕ್ಕೆ ಕರೆತರಲಾಗುತ್ತಿತ್ತು. ಆದರೆ, ಈ ಲಾರಿಗೆ ಸಹಾಯಕನಾಗಲೀ ಅಥವಾ ಬದಲಿ ಚಾಲಕನಾಗಲೀ ಇರಲಿಲ್ಲ. ಆದ್ದರಿಂದ ಸುಮಾರು ದೂರದವರೆಗೆ ಸಹಾಯಕರಿಲ್ಲದೆ ಚಾಲನೆ ಮಾಡಬೇಕಾಗಿ ಬಂದಿದ್ದರಿಂದ ತುಂಬಾ ದಣಿದಿದ್ದೆ ಎಂದು ಚಾಲಕ ತಿಳಿಸಿದ್ದಾನೆ. ಇದೇ ಅಪಘಾತಕ್ಕೆ ಕಾರಣ ಎಂದು ಚಾಲಕ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.