ಬೆಂಗಳೂರು(ನ.26): ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಗುರುವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಇದೇ ವೇಳೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಈ ಕಾರ್ಮಿಕ ಮುಷ್ಕರಕ್ಕೆ ಬೆಂಬಲ ನೀಡಿದೆ. ಹೀಗಾಗಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಆದರೆ ದೇಶದ ಪಪ್ರಮುಖ ಬ್ಯಾಂಕ್‌ಗಳ ಪೈಕಿ ಒಂದಾದ ಎಸ್‌ಬಿಐ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಭಾರತೀಯ ಮಜದೂರ್ ಸಂಘವನ್ನು ಹೊರತುಪಡಿಸಿ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗಿಯಾಗಲಿದ್ದು, 25 ಕೋಟಿ ಕಾರ್ಮಿಕರು ಮುಷ್ಕರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಇದೇ ವೇಳೆ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳ ಮೂವತ್ತು ಸಾವಿರ ಉದ್ಯೋಗಿಗಳು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. 

ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕ ಸಭೆಯಲ್ಲಿ ಮೂರು ಕಾರ್ಮಿಕ ಕಾಯ್ದೆಗಳನ್ನು ಪಾಸ್ ಮಾಡಿತ್ತು. ಈ ಕಾಯ್ದೆಗಳು ಕಾರ್ಪೋರೇಟ್ ಸ್ನೇಹಿಯಾಗಿವೆ. ಶೇ. 75 ರಷ್ಟು ಕಾರ್ಮಿಕರಿಗೆ ಕಾನೂನಾತ್ಮಕ ರಕ್ಷಣೆ ದೊರಕುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.