ಕಣ್ಣಾಮುಚ್ಚಾಲೆ ಆಡುವಾಗ ಬಾಂಗ್ಲಾದಿಂದ, ಮಲೇಷ್ಯಾಗೆ ಹೋದ ಬಾಲಕ!
ಬಾಂಗ್ಲಾದೇಶದ 15 ವರ್ಷದ ಹುಡುಗನೊಬ್ಬ ಕಣ್ಣಾಮುಚ್ಚಾಲೆ ಆಟದಲ್ಲಿ ಶಿಪ್ಪಿಂಗ್ ಕಂಟೈನರ್‌ನಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ಸ್ವಲ್ಪ ಸಮಯ ನಂತರ ಅದಕ್ಕೆ ಬೀಗ ಹಾಕಿದ್ದು, ಒಂದು ವಾರದ ನಂತರ ಬೇರೊಂದು ದೇಶದಲ್ಲಿ ತನ್ನನ್ನು ತಾನು ಕಂಡುಕೊಂಡಿದ್ದಾನೆ.

ಕೌಲಾಲಂಪುರ (ಜನವರಿ 31, 2023): ಮಕ್ಕಳಾಗಿದ್ದಾಗ, ನಾವು ನಮ್ಮ ಸ್ನೇಹಿತರು ಮತ್ತು ಸೋದರಸಂಬಂಧಿಗಳೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡಿರೋದು ನೆನಪಿರುತ್ತದೆ ಅಲ್ವಾ..? ಬಚ್ಚಿಟ್ಟುಕೊಳ್ಳೋಕೆ ಹೋಗಿ ಎಲ್ಲೆಲ್ಲೋ ಹೋಗಿ ಮನೆಯಲ್ಲಿ ಬೈದಿರುತ್ತಾರೆ, ಇಲ್ಲ ಹೊಡೆದಿರುತ್ತಾರೆ. ಅಲ್ಲದೆ, ಇಂತಹ ಸ್ಥಳ ಬಟ್ಟು ಹೋಗಬೇಡಿ ಎಂದೂ ಎಚ್ಚರಿಕೆ ಕೊಟ್ಟಿರುತ್ತಾರೆ. ಈಗ ಅದೆಲ್ಲವನ್ನೂ ನೆನಪಿಸಿಕೊಂಡರೆ, ನಮ್ಮ ಆಗಿನ ತುಂಟತನ ನೆನಪಾಗಬಹುದು. ಆದರೂ, ಆ ಸಮಯದಲ್ಲಿ ಅವರ ಕಾಳಜಿ ಮತ್ತು ಚಿಂತೆಗಳನ್ನು ನಾವೀಗ ಅರ್ಥ ಮಾಡಿಕೊಳ್ಳಬಹುದು. ಈಗ್ಯಾಕಪ್ಪಾ ಕಣ್ಣಾಮುಚ್ಚಾಲೆ ಆಟದ ವಿಚಾರ ಅಂದರೆ ಇತ್ತೀಚೆಗೆ ಹುಡುಗನೊಬ್ಬ ಈ ಆಟ ಆಡೋಕೆ ಹೋಗಿ ಭಾರಿ ಬೆಲೆ ತೆರಬೇಕಾಗಿದೆ, ಬೇರೆ ದೇಶಕ್ಕೆ ಹೋಗಿದ್ದಾನೆ ನೋಡಿ..
ಹೌದು, ಬಾಂಗ್ಲಾದೇಶದ (Bangladesh) 15 ವರ್ಷದ ಹುಡುಗನೊಬ್ಬ ಕಣ್ಣಾಮುಚ್ಚಾಲೆ ಆಟದಲ್ಲಿ ಶಿಪ್ಪಿಂಗ್ ಕಂಟೈನರ್‌ನಲ್ಲಿ (Shipping Container) ಬಚ್ಚಿಟ್ಟುಕೊಂಡಿದ್ದಾನೆ. ಸ್ವಲ್ಪ ಸಮಯ ನಂತರ ಅದಕ್ಕೆ ಬೀಗ ಹಾಕಿದ್ದು, ಒಂದು ವಾರದ ನಂತರ ಬೇರೊಂದು ದೇಶದಲ್ಲಿ ತನ್ನನ್ನು ತಾನು ಕಂಡುಕೊಂಡಿದ್ದಾನೆ.
ಇದನ್ನು ಓದಿ: ಕೋಪಗೊಂಡ ಹೆಂಡತಿಯೊಂದಿಗೆ ಬದುಕೋದು ಚಿತ್ರಹಿಂಸೆಯಂತೆ ಎಂದ ಹೈಕೋರ್ಟ್: ವಿಚ್ಛೇದನಕ್ಕೆ ಒಪ್ಪಿಗೆ
ಫಹೀಮ್ ಎಂದು ಗುರುತಿಸಲಾದ ಹದಿಹರೆಯದ ಯುವಕ ಜನವರಿ 11 ರಂದು ಬಂದರು ನಗರವಾದ (Port City) ಬಾಂಗ್ಲಾದೇಶದ (Bangladesh) ಚಿತ್ತಗಾಂಗ್‌ನಲ್ಲಿ (Chittagong) ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದನು. ಅವನು ಆಟದ ಭಾಗವಾಗಿ ಕಂಟೈನರ್‌ಗೆ ಬಂದಿದ್ದು, ನಂತರ ಅಲ್ಲೇ ನಿದ್ರೆಗೆ ಜಾರಿದ್ದಾನೆ. ಅವನ ದುರಾದೃಷ್ಟಕ್ಕೆ, ಕಂಟೇನರ್ ಅನ್ನು ಮಲೇಷ್ಯಾಕ್ಕೆ (Malaysia) ವಾಣಿಜ್ಯ ಹಡಗಿನಲ್ಲಿ ಲೋಡ್ ಮಾಡಲಾಗಿದೆ. 6 ದಿನಗಳ ನಂತರ, ಅವನು ಕಂಟೇನರ್‌ನಲ್ಲಿ ಹಸಿವಿನಿಂದ ಬಳಲುತ್ತಿದ್ದ ಮತ್ತು ನಿರ್ಜಲೀಕರಣಗೊಂಡಿರುವುದು ಕಂಡುಬಂದಿದೆ. ಯಾಕೆಂದರೆ ಈ ಸಮಯದಲ್ಲಿ ಆತ ಏನನ್ನೂ ಸೇವಿಸಿಲ್ಲ ಎಂದು ತಿಳಿದುಬಂದಿದೆ.
ಹುಡುಗ ತನ್ನ ದೇಶದಿಂದ ಸುಮಾರು 2,300 ಮೈಲುಗಳಷ್ಟು ದೂರದ ಅನಿರೀಕ್ಷಿತ ಪ್ರಯಾಣ ಮಾಡಿದ್ದು, ಇದರಿಂದ ಅವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ರೆಡ್ಡಿಟ್ ವಿಡಿಯೋದಲ್ಲಿ ತೋರಿಸಲಾಗಿದೆ. ಅಧಿಕಾರಿಗಳು ಅವನನ್ನು ನೋಡಿದಾಗ, ಹುಡುಗನಿಗೆ ತೀವ್ರ ಜ್ವರ ಇತ್ತು ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ. ಶೀಘ್ರದಲ್ಲೇ ಅವನನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದೂ ಹೇಳಲಾಗಿದೆ. ಇನ್ನು, ಈ ಅಚ್ಚರಿಯ ಘಟನೆ ಬಗ್ಗೆ ಮಾಹಿತಿ ನೀಡಿದ ಮಲೇಷ್ಯಾ ಗೃಹ ಸಚಿವ ಡಾಟುಕ್ ಸೆರಿ ಸೈಫುದ್ದೀನ್ ನಸುಶನ್ ಇಸ್ಮಾಯಿಲ್, ಬಾಲಕನು ಕಂಟೇನರ್‌ಗೆ ಪ್ರವೇಶಿಸಿ, ನಿದ್ರಿಸಿದನು ಮತ್ತು ಇಲ್ಲಿ ತನ್ನನ್ನು ಕಂಡುಕೊಂಡಿದ್ದಾನೆ ಎಂದು ನಂಬಲಾಗಿದೆ ಎಂದು ಮಲೇಷ್ಯಾ ಮೂಲದ ಮಾಧ್ಯಮ ಔಟ್ಲೆಟ್ ಬರ್ನಾಮಾಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 24 ವರ್ಷಗಳ ಕಾಲ ‘ಸಿಸ್ಟರ್’ ಅಗಿದ್ದವರಿಗೆ ಚಿಗುರಿತು ಪ್ರೀತಿ: ಸನ್ಯಾಸತ್ವ ತೊರೆದು ಕ್ರೈಸ್ತ ಸನ್ಯಾಸಿ ಜತೆಗೆ ವಿವಾಹ..!
ಈ ಮಧ್ಯೆ, ಪೊಲೀಸರು ಆರಂಭದಲ್ಲಿ ಬಾಲಕನ ಪ್ರಕರಣವನ್ನು ಮಾನವ ಕಳ್ಳಸಾಗಣೆಯ ಭಾಗ ಎಂದು ಶಂಕಿಸಿದ್ದಾರೆ. ಆದರೆ, ನಂತರ ಬಾಲಕ ನಿದ್ರೆ ಮಾಡಿ ಹೀಗೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 2 ತಿಂಗಳ ಕಂದಮ್ಮನನ್ನು ಆಸ್ಪತ್ರೆಯ 3ನೇ ಮಹಡಿಯಿಂದ ಎಸೆದು ಕೊಂದ ಹೆತ್ತ ತಾಯಿ..!