ದೇಶದಿಂದ ಬಾಂಗ್ಲಾಕ್ಕೆ ಹೋದವರ ಪೈಕಿ ಬೆಂಗಳೂರಿನವರೇ ಹೆಚ್ಚು!| ದೆಹಲಿ, ಮುಂಬೈನಲ್ಲಿದ್ದ ನುಸುಳುಕೋರರೂ ಬಾಂಗ್ಲಾಕ್ಕೆ| ನಿರಾಶ್ರಿತರ ಬಳಿ ಆಧಾರ್‌, ವೋಟರ್‌ ಐಡಿ, ಪಡಿತರ ಚೀಟಿ ಪತ್ತೆ| ನಿರಾಶ್ರಿತರ ಕುರಿತಾಗಿ ಬಾಂಗ್ಲಾ ಅಧಿಕಾರಿಯೊಬ್ಬರ ಮಾಹಿತಿ

ಕೋಲ್ಕತಾ[ಜ.07]: ದೇಶದಲ್ಲಿರುವ ಅಕ್ರಮ ನಿವಾಸಿಗಳನ್ನು ಗುರುತಿಸಿ ದೇಶದಿಂದ ಹೊರದಬ್ಬಲು ರಾಮಬಾಣವೆಂದೇ ಹೇಳಲಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ರಾಷ್ಟಾ್ರದ್ಯಂತ ಜಾರಿ ಮಾಡಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದಾಗ್ಯೂ, ಎನ್‌ಆರ್‌ಸಿ ಜಾರಿ ಭೀತಿಯಿಂದಾಗಿ, ಭಾರತ ತೊರೆದು ನೆರೆಯ ಬಾಂಗ್ಲಾದೇಶಕ್ಕೆ ನುಸುಳುತ್ತಿರುವವರಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರಿನವರೇ ಹೆಚ್ಚಿನವರಾಗಿದ್ದಾರೆ ಎಂಬ ಮಾಹಿತಿ ಇದೀಗ ಬಯಲಾಗಿದೆ.

ಎನ್‌ಆರ್‌ಸಿ ಜಾರಿ ಭೀತಿಯಿಂದ ಪಶ್ಚಿಮ ಬಂಗಾಳದ ಉತ್ತರ 24 ಪರಗಣಸ್‌ ಜಿಲ್ಲೆಯೊಂದರ ಮೂಲಕವಾಗಿಯೇ ನಿತ್ಯ 200ಕ್ಕೂ ಹೆಚ್ಚು ಮಂದಿ ಅಕ್ರಮ ನಿವಾಸಿಗಳು ಬಾಂಗ್ಲಾದೇಶಕ್ಕೆ ನುಸುಳುತ್ತಿದ್ದಾರೆ. ಅಲ್ಲದೆ, ನಾಡಿಯಾ ಜಿಲ್ಲೆ ಮುಖಾಂತರವಾಗಿಯೂ ಬಾಂಗ್ಲಾದೇಶಕ್ಕೆ ಹೋಗುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಪಶ್ಚಿಮ ಬಂಗಾಳದ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಉತ್ತರ ಪರಗಣಾಸ್‌ ಜಿಲ್ಲೆಯ ಗಡಿ ಮೂಲಕ ಕಳೆದೆರಡು ತಿಂಗಳಲ್ಲಿ ಪ್ರತೀ ಬಾರಿ 5 ಸಾವಿರ ಮಂದಿಯಂತೆ ಹಲವು ಬಾರಿ ಭಾರತದಿಂದ ಬಾಂಗ್ಲಾಕ್ಕೆ ರವಾನಿಸಿದ್ದೇವೆ ಎಂದು ದಳ್ಳಾಳಿಯೋರ್ವ ತಿಳಿಸಿದ್ದಾನೆ.

ಇದಕ್ಕೆ ಪೂರಕವೆಂಬಂತೆ, ಎನ್‌ಆರ್‌ಸಿ ಜಾರಿ ಬಗ್ಗೆ ಚಿಂತನೆ ಆರಂಭವಾಗಿದ್ದ ಕಳೆದ ವರ್ಷದ ನವೆಂಬರ್‌ ಮಧ್ಯಂತರ ಅವಧಿಯಿಂದ ಇದುವರೆಗೂ ಭಾರತದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದ 450 ಅಕ್ರಮ ನಿವಾಸಿಗಳು ಬಂಧನಕ್ಕೀಡಾಗಿದ್ದಾರೆ. ಬಾಂಗ್ಲಾಕ್ಕೆ ನುಸುಳಿ ಬಂಧನಕ್ಕೀಡಾದವರಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು, ಮುಂಬೈ ಹಾಗೂ ದೆಹಲಿಯಲ್ಲಿದ್ದವರೇ ಹೆಚ್ಚಿನವರಾಗಿದ್ದಾರೆ. ಅವರೆಲ್ಲರೂ ತಮ್ಮಲ್ಲಿ, ಭಾರತದ ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಮತದಾರ ಗುರುತಿನ ಚೀಟಿ ಹೊಂದಿದ್ದರು ಎಂದು ಬಾಂಗ್ಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.