Asianet Suvarna News Asianet Suvarna News

ಚಂಡಿಘಡ ಪ್ರಯಾಣಿಕರಿಗೆ ಇಂಡಿಗೋ ಕ್ಯಾಪ್ಟನ್ ಸರ್ಪ್ರೈಸ್, ಪಂಜಾಬಿ ಭಾಷೆಯಲ್ಲಿ ಅನೌನ್ಸ್‌ಮೆಂಟ್!

ಬೆಂಗಳೂರು, ಚಂಡೀಘಡ ಇಂಡಿಗೋ ವಿಮಾನ ಹತ್ತಿದ ಪ್ರಯಾಣಿಕರಿಗೆ ಇಂಡಿಗೋ ಕ್ಯಾಪ್ಟನ್ ಅಚ್ಚರಿ ನೀಡಿದ್ದಾರೆ. ಇಂಗ್ಲೀಷ್ ಹಾಗೂ ಪಂಜಾಬಿ ಭಾಷೆಯಲ್ಲಿ ಅನೌನ್ಸ್‌ಮೆಂಟ್ ಮಾಡಿ ಗಮನಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕ್ಯಾಪ್ಟನ್ ಘೋಷಣೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
 

Bangalore to Chandigarh Indigo Pilot delighted passengers onboard with announcements in Punjabi and English ckm
Author
Bengaluru, First Published Aug 25, 2022, 7:14 PM IST

ಬೆಂಗಳೂರು(ಆ.25):  ಇಂಡಿಗೋ ಪೈಲೆಟ್ ಕ್ಯಾಪ್ಟನ್ ಅನೌನ್ಸ್‌ಮೆಂಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರಿನಿಂದ ಚಂಡಿಘಡಕ್ಕೆ ತೆರಳಲು ವಿಮಾನ ಒಳಹೊಕ್ಕ ಪ್ರಯಾಣಿಕರಿಗೆ ಹಿತ ಅನುಭವವಾಗಿತ್ತು. ಕಾರಣ ಪಂಜಾಬ್ ಮೂಲದ ಕ್ಯಾಪ್ಟನ್ ಇಂಗ್ಲೀಷ್ ಹಾಗೂ ಪಂಜಾಬಿ ಭಾಷೆಯಲ್ಲಿ ಫ್ಲೈಟ್ ಅನೌನ್ಸ್‌ಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಇಂಡಿಗೋ ಫ್ಲೈಟ್‌ನಲ್ಲಿದ್ದ ಪ್ರಯಾಣಿಕ ದನ್ವಿರ್ ಸಿಂಗ್ ಹಂಚಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.  ಕ್ಯಾಪ್ಟನ್ ತಮ್ಮ ಅನೌನ್ಸ್‌ಮೆಂಟ್‌ನಲ್ಲಿ ಮಾರ್ಗಸೂಚಿಗಳ ಕುರಿತು ವಿವರಿಸಿದ್ದಾರೆ. ಇದರ ನಡುವೆ ಕೆಲ ಹಾಸ್ಯ ಚಟಾಕಿಗಳನ್ನು ಹಾರಿಸಿ ಪ್ರಯಾಣಿಕರ ಗಮನಸೆಳೆದಿದ್ದಾರೆ. 

ದೇಶಿಯ ವಿಮಾನದಲ್ಲಿ ಸಾಮಾನ್ಯವಾಗಿ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಅನೌನ್ಸ್‌ಮೆಂಟ್ ಮಾಡಲಾಗುತ್ತದೆ. ಪಂಜಾಬ್ ರಾಜಧಾನಿ ಚಂಡೀಘಡಕ್ಕೆ ತೆರಳುವ ವಿಮಾನದಲ್ಲಿ ಪ್ರಯಾಣಿಕರಿಗೆ ತಮ್ಮ ಮಾತೃಭಾಷೆ ಪಂಜಾಬಿಯಲ್ಲಿ ಅನೌನ್ಸ್‌ಮೆಂಟ್ ಮಾಡಲಾಗಿದೆ. ಆರಂಭದಲ್ಲೇ ಪೈಲೆಟ್ ಕ್ಯಾಪ್ಟನ್ ಪಂಜಾಬಿ ಭಾಷೆಯಲ್ಲಿ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ವಿಮಾನದ ಎಡಭಾಗದಲ್ಲಿ ಕುಳಿತಿರುವ ಪ್ರಯಾಣಿಕರು ಪ್ರಯಾಣದ ವೇಳೆ ತಮ್ಮ ಫೋಟೋಗ್ರಫಿ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವಿದೆ. ಇನ್ನು ವಿಮಾನದ ಬಲಭಾಗದಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಭೋಪಾಲ್ ವೀಕ್ಷಿಸುವ ಅವಕಾಶವೂ ಸಿಗಲಿದೆ. ಈ ಅವಕಾಶ ಕಿಟಕಿ ಬದಿಯಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಮಾತ್ರ. ಇನ್ನು ಕಿಟಕಿ ಬದಿ ಸಿಗದೇ ನಡುವಿನಲ್ಲಿ ಕುಳಿತಿರುವ ಪ್ರಯಾಣಿಕರು ಒಬ್ಬರನ್ನೊಬ್ಬರ ಮುಖ ನೋಡಬಹುದು. ಇದರಿಂದ ನಾವೇನು ಕಲಿಯಬಹುದು. ಮುಂದಿನ ಬಾರಿ ವಿಂಡೋ ಸೀಟ್ ಪಡೆಯಬೇಕು ಎಂದು ಕ್ಯಾಪ್ಟನ್ ಪಂಜಾಬಿ ಭಾಷೆಯಲ್ಲಿ ಹಾಸ್ಯಚಟಾಕಿ ಹಾರಿಸಿದ್ದಾರೆ.

IndiGo Airlines Flight : ಇಂಡಿಗೋ ವಿಮಾನದಲ್ಲಿ ತುಳು ಅನೌನ್ಸ್‌ಮೆಂಟ್‌!

ಬಳಿಕ ವಿಮಾನದಲ್ಲಿ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದ್ದಾರೆ. ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ ಎಂದಿದ್ದಾರೆ. ವಿಮಾನ ಲ್ಯಾಂಡಿಂಗ್ ಬಳಿಕ ಪ್ರಯಾಣಿಕರು ಅವಸರ ಮಾಡಬೇಡಿ. ಲಗೇಜು ತೆಗೆದು ಇಳಿಯುವ ಧಾವಂತ  ಮಾಡಬೇಡಿ. ನಿಮ್ಮ ಲಗೇಜು ಸುರಕ್ಷಿತವಾಗಿದೆ. ನಿಧಾನವಾಗಿ ಹಾಗೂ ಸುರಕ್ಷಿತವಾಗಿ ಇಳಿಯಿರಿ ಎಂದು ಕ್ಯಾಪ್ಟನ್ ಪಂಜಾಬ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಅನೌನ್ಸ್‌ಮೆಂಟ್ ಮಾಡಿದ್ದಾರೆ.

 

 

ಭಾರತೀಯ ಸ್ಥಳೀಯ ಭಾಷೆಯಲ್ಲಿ ಪೈಲೈಟ್ ಅನೌನ್ಸ್‌ಮೆಂಟ್ ಮಾಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ತುಳು ಭಾಷೆಯಲ್ಲಿ ಪೈಲೆಟ್ ಅನೌನ್ಸ್‌ಮೆಂಟ್ ಮಾಡಿದ ಘಟನ ಭಾರಿ ವೈರಲ್ ಆಗಿತ್ತು. ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸುವ ವಿಮಾನಯಾನಿಗಳಿಗೆ ನಿಲ್ದಾಣದಿಂದ ಹೊರಡುವ ವೇಳೆಗೆ ವಿಮಾನದ ಪೈಲಟ್‌ ‘ಮಾತೆರೆಗ್ಲಾ ಸೊಲ್ಮೆಲು’ ಎಂದು ತುಳು ಭಾಷೆಯಲ್ಲಿ ಅನೌನ್ಸ್‌ಮೆಂಟ್‌ ಮಾಡುವ ಮೂಲಕ ಪ್ರಾದೇಶಿಕ ಭಾಷಾ ಪ್ರೇಮ ಮೆರೆದಿದ್ದರು. ಮುಂಬೈನಿಂದ ಮಂಗಳೂರಿಗೆ ಸಂಚರಿಸಿದ ಇಂಡಿಗೋ ವಿಮಾನದ ಉಡುಪಿ ಮೂಲದ ಪೈಲಟ್‌ ಪ್ರದೀಪ್‌ ಪದ್ಮಶಾಲಿ ಅನೌನ್ಸ್‌ಮೆಂಟ್‌ ಮೂಲಕ ತುಳು ಭಾಷೆಗೆ ಗೌರವ ಸಲ್ಲಿಸಿದ್ದಾರೆ. ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಕಾಕ್‌ಪಿಟ್‌ನಿಂದ ತುಳುವಿನಲ್ಲೇ ಮಾತು ಆರಂಭಿಸಿದ ಪೈಲಟ್‌, ಇನ್ನು 1 ಗಂಟೆ 5 ನಿಮಿಷಕ್ಕೆ ಮಂಗಳೂರು ತಲುಪುತ್ತೇವೆ. ದಯಮಾಡಿ ಎಲ್ಲರೂ ಆರಾಮವಾಗಿದ್ದು ಸಹಕರಿಸಬೇಕು.  ಈ ವಿಮಾನ ಪ್ರಯಾಣದ ಖುಷಿ ಅನುಭವಿಸಬೇಕು. ಇಂದು ನಮ್ಮೊಂದಿಗೆ ಪ್ರಯಾಣಿಸಲು ಮನಸ್ಸು ಮಾಡಿದ್ದಕ್ಕೆ ನಿಮಗೆಲ್ಲ ನನ್ನ ಹೃದಯಾಂತರಾಳದ ನಮಸ್ಕಾರ ಎಂದಿದ್ದಾರೆ. ಬಳಿಕ ಇಂಗ್ಲಿಷ್‌ನಲ್ಲಿ ಮಾತು ಮುಂದುವರಿಸಿ, ನಾನೀಗ ಸ್ಥಳೀಯವಾಗಿ, ದಕ್ಷಿಣ ಕರ್ನಾಟಕದ ಭಾಷೆ ತುಳುವಿನಲ್ಲಿ ಮಾತನಾಡಿದೆ ಎಂದಿದ್ದಾರೆ. ಪೈಲಟ್‌ ಪ್ರದೀಪ್‌ ಪದ್ಮಶಾಲಿ ಅವರ ತುಳು ಭಾಷೆಯ ಅನೌನ್ಸ್‌ಮೆಂಟ್‌ ವಿಡಿಯೋ ವೈರಲ್‌ ಆಗಿದೆ.
 

Follow Us:
Download App:
  • android
  • ios