ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ| ಚೀನಾ ವಿರುದ್ಧ ಭುಗಿಲೆದ್ದ ಆಕ್ರೋಶ| ದೇಶಾದ್ಯಂತ ಚೀನಾ ಉತ್ಪನ್ನ ನಿಷೇಧಿಸಿ ಎಂಬ ಕೂಗು| ಇತ್ತ ಚೈನೀಸ್ ಫುಡ್ ಮಾರಾಟ ಮಾಡುವ ಹೋಟೆಲ್‌ ಬಂದ್ ಮಾಡಿ ಎಂದು ಆಗ್ರಹಿಸಿದ ಕೇಂದ್ರ ಸಚಿವ

ನವದೆಹಲಿ(ಜೂ.18): ಚೀನಾ ಜೊತೆಗೆ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಇಪ್ಪತ್ತು ಯೋಧರು ಹುತಾತ್ಮರಾದ ಬೆನ್ನಲ್ಲೇ ದೇಶಾದ್ಯಂತ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡಿ ಎಂಬ ಕೂಗು ಎದ್ದಿದ್ದರೆ, ಮತ್ತೊಂದೆಡೆ ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಸಿಟ್ಟು ಹೊರ ಹಾಕಲಾರಂಭಿಸಿದ್ದಾರೆ. ಹೀಗಿರುವಾಗ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭಾರತದಲ್ಲಿ ಚೈನೀಸ್ ಫುಡ್ ನೀಡುವ ಹೊಟೇಲ್‌ಗಳನ್ನು ಬಂದ್‌ ಮಾಡಬೇಕೆಂಬ ಧ್ವನಿ ಎತ್ತಿದ್ದಾರೆ.

ಹೌದು ಸುದ್ದಿಸಂಸ್ಥೆ ಎಎನ್‌ಐ ಈ ಬಗ್ಗೆ ಈ ಸಂಬಂಧ ಟ್ವೀಟ್ ಮಾಡಿದ್ದು, ಅಠಾವಳೆ ಚೈನೀಸ್ ಫುಡ್ ನಿರ್ಬಂಧಿಸುವಂತೆ ಆಗ್ರಹಿಸಿದ್ದಾರೆ.

Scroll to load tweet…

ಇನ್ನು ಈ ಹಿಂದೆ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಅಠಾವಳೆ 'ಚೀನಾ ಭಾರತಕ್ಕೆ ದ್ರೋಹ ಎಸಗಿದೆ. ಹೀಗಾಗಿ ಚೀನಾ ನಿರ್ಮಿತ ಎಲ್ಲಾ ಉತ್ಪನ್ನಗಳನ್ನು ಭಾರತದಲ್ಲಿ ನಿರ್ಬಂಧಿಸಬೇಕು. ಚೈನೀಸ್ ಫುಡ್ ಮಾರಾಟ ಮಾಡುವ ಭಾರತದಲ್ಲಿರುವ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಬೇಕು' ಎಂದಿದ್ದಾರೆ.