ಚಂಡೀಗಢ(ಅ.21): ಪಂಜಾಬ್‌ ಹಾಗೂ ಹರಾರ‍ಯಣದಲ್ಲಿ ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ನಿಷ್ಕಿ್ರಯಗೊಳಿಸಲು ಪಂಜಾಬ್‌ ಸರ್ಕಾರ ಮಂಗಳವಾರ ನಿರ್ಣಯ ಅಂಗೀಕರಿಸಿದೆ. ಅಲ್ಲದೆ ಸಂಸತ್ತು ಅಂಗೀಕರಿಸಿದ್ದ ಮೂರು ಕಾಯ್ದೆಗಳಿಗೆ ಪ್ರತಿಯಾಗಿ ನಾಲ್ಕು ಮಸೂದೆಗಳನ್ನೂ ಪಾಸ್‌ ಮಾಡಿದೆ.

ವಿಶೇಷ ಅಧಿವೇಶನದ 2ನೇ ದಿನ 5 ತಾಸು ಚರ್ಚೆ ನಡೆಸಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ಶಿರೋಮಣಿ ಅಕಾಲಿದಳ, ಆಮ್‌ ಆದ್ಮಿ ಪಾರ್ಟಿ ಶಾಸಕರು ಮಸೂದೆ, ನಿರ್ಣಯಗಳನ್ನು ಬೆಂಬಲಿಸಿದ್ದರೆ, ಬಿಜೆಪಿಯ ಇಬ್ಬರು ಶಾಸಕರು ಗೈರಾಗಿದ್ದರು.

ಕನಿಷ್ಠ ಬೆಂಬಲ ಬೆಲೆಗಿಂತ ಗೋಧಿ ಅಥವಾ ಭತ್ತವನ್ನು ಮಾರಾಟ ಅಥವಾ ಖರೀದಿ ಮಾಡಿದರೆ 3 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ. 2.5 ಎಕರೆವರೆಗೆ ಜಮೀನು ಹೊಂದಿದವರಿಗೆ ಜಪ್ತಿಯಿಂದ ವಿನಾಯಿತಿ ನೀಡಲಾಗಿದೆ. ಕೃಷಿ ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

ಮುಂದೇನು?

ಅಂಗೀಕಾರವಾಗಿರುವ ಮಸೂದೆಗಳು ರಾಜ್ಯಪಾಲರ ಅಂಕಿತ ಪಡೆಯಬೇಕು. ರಾಜ್ಯಪಾಲರು ಸಹಿ ವಿಳಂಬ ಮಾಡಬಹುದು. ರಾಷ್ಟ್ರಪತಿಗಳ ಅವಗಾಹನೆಗೂ ಕಳುಹಿಸಬಹುದು. ರಾಜ್ಯಪಾಲರು ಅಂಕಿತ ಹಾಕದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ತಿಳಿಸಿದ್ದಾರೆ