ಅಯೋಧ್ಯೆ ಮಸೀದಿಗೆ ಸಿಪಾಯಿ ದಂಗೆ ಯೋಧನ ಹೆಸರು ಸಾಧ್ಯತೆ| ಜ.26ರಂದು ಶಂಕುಸ್ಥಾಪನೆ ನೆರವೇರಲಿರುವ ಇಲ್ಲಿನ ಹೊಸ ಮಸೀದಿ| ಬಾಬರ್‌ ಬದಲು ಅಹಮದುಲ್ಲಾ ಹೆಸರು

ಅಯೋಧ್ಯಾ(ಜ.26): ಜ.26ರಂದು ಶಂಕುಸ್ಥಾಪನೆ ನೆರವೇರಲಿರುವ ಇಲ್ಲಿನ ಹೊಸ ಮಸೀದಿಗೆ, 1857ರ ಸಿಪಾಯಿ ದಂಗೆ ಹೋರಾಟದ ವೇಳೆ ಪ್ರಮುಖ ಪಾತ್ರ ವಹಿಸಿದ್ದ ಮೌಲ್ವಿ ಅಹಮದುಲ್ಲಾ ಶಾ ಹೆಸರಿಡುವ ಸಾಧ್ಯತೆ ಇದೆ.

ಈ ಹಿಂದಿನ ಮಸೀದಿಗೆ ಮೊಗಲರ ದೊರೆ ಬಾಬರ್‌ನ ಹೆಸರಿಡಲಾಗಿತ್ತು. ಹೊಸ ಮಸೀದಿಗೂ ಬಾಬರ್‌ ಹೆಸರಿಡುವ ಪ್ರಸ್ತಾಪ ಬಂದಿತ್ತಾದರೂ, ಇಸ್ಲಾಂನ ನಿಜವಾದ ಪಾಲಕ, ಮೌಲ್ಯಗಳನ್ನು ಪ್ರತಿನಿಧಿಸಿದ ವ್ಯಕ್ತಿ ಮತ್ತು ಸರ್ವಧರ್ಮ ಸಹಿಷ್ಣು ಎಂಬ ಖ್ಯಾತಿ ಹೊಂದಿದ್ದ ಶಾ ಅವರ ಹೆಸರನ್ನು ಇಡಬೇಕೆಂಬ ಹಲವು ಪ್ರಸ್ತಾಪಗಳು ಸಲ್ಲಿಕೆಯಾಗಿದ್ದವು.

‘ಈ ಬಗ್ಗೆ ನಾವು ಕೂಡಾ ಸಾಕಷ್ಟುಚರ್ಚೆ ನಡೆಸಿದ್ದೇವೆ. ಅಯೋಧ್ಯೆ ಮಸೀದಿ ಯೋಜನೆಯನ್ನು ಧಾರ್ಮಿಕ ಭಾತೃತ್ವ ಮತ್ತು ದೇಶಭಕ್ತಿಯ ಸಂಕೇತವಾಗಿ ನಾವು ಶಾ ಹೆಸರಿಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ. ಶೀಘ್ರವೇ ಈ ಕುರಿತು ಅಂತಿಮ ನಿರ್ಧಾರ ಕೈಗೊಂಡು, ನೂತನ ಮಸೀದಿಗೆ ಯಾರ ಹೆಸರು ಇಡಲಾಗುವುದು ಎಂದು ಪ್ರಕಟಿಸಲಾಗುವುದು’ ಎಂದು ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಸುನ್ನಿ ವಕ್ಫ್ಬೋರ್ಡ್‌ನಿಂದ ನೇಮಿತವಾಗಿರುವ ಇಂಡೋ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ನ ಕಾರ್ಯದರ್ಶಿ ಅಥರ್‌ ಹುಸೇನ್‌ ತಿಳಿಸಿದ್ದಾರೆ.

ಯಾರು ಮಹಮದುಲ್ಲಾ?:

1857ರಲ್ಲಿ ಬ್ರಿಟೀಷರ ವಿರುದ್ಧ ಆರಂಭವಾದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಹಮದುಲ್ಲಾ ಶಾ ಅವರು ಅವಧ್‌ ಪ್ರದೇಶದಲ್ಲಿ ತಮ್ಮ ತಂಡದೊಂದಿಗೆ ದಂಗೆ ಎದ್ದಿದ್ದರು. ಸ್ಥಳೀಯ ಮಸ್ಜೀದ್‌ ಸರಾಯ್‌ ಅನ್ನು ತಮ್ಮ ಕೇಂದ್ರ ಸ್ಥಾನ ಮಾಡಿಕೊಂಡು ಸಿಪಾಯಿ ದಂಗೆಯಲ್ಲಿ ಭಾಗಿಯಾಗಿದ್ದರು. ಅವರ ಸಂಘಟನಾ ಚಾತುರ‍್ಯ, ಧೈರ್ಯ ಸಾಹಸವನ್ನು ಹಲವು ಬ್ರಿಟಿಷ್‌ ಅಧಿಕಾರಿಗಳೇ ಮುಕ್ತಕಂಠದಿಂದ ಹೊಗಳಿದ್ದರು. 1858ರ ಜೂ5. ರಂದು ಶಾ ಹುತಾತ್ಮರಾಗಿದ್ದರು.

ಇಂದು ಅಯೋಧ್ಯೆ ಮಸೀದಿ ನಿರ್ಮಾಣ ಶುರು

ಈ ಹಿಂದಿನ ಬಾಬ್ರಿ ಮಸೀದಿಗೆ ಬದಲಾಗಿ ಅಯೋಧ್ಯೆಯ ಹೊರವಲಯದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ ಮಸೀದಿ ಕಾಮಗಾರಿಗೆ ಜ.26ರಂದು ತ್ರಿವರ್ಣ ಧ್ವಜ ಹಾರಿಸಿ ಮತ್ತು ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಲಾಗುವುದು.

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಅಯೋಧ್ಯೆಯ 5 ಎಕರೆ ಜಮೀನಿನಲ್ಲಿ ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಶನ್‌, ಜನವರಿ 26ರ ಬೆಳಗ್ಗೆ 8.30ಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು. ಮಸೀದಿಯ ಜೊತೆಗೆ ಆಸ್ಪತ್ರೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ, ಸಮುದಾಯ ಅಡುಗೆ ಮನೆ, ಭಾರತೀಯ-ಇಸ್ಲಾಮಿಕ ಸಾಂಸ್ಕೃತಿಕ ಸಂಶೋಧನಾ ಕೇಂದ್ರ, ಮುದ್ರಣಾಲಯ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ.