ಲಖನೌ(ಜ.27): ರಾಮಮಂದಿರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಆದೇಶದಂತೆ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಗೆ ಮಂಗಳವಾರ ಚಾಲನೆ ನೀಡಲಾಯಿತು.

ರಾಮಮಂದಿರದಿಂದ 25 ಕಿ.ಮೀ ದೂರದ ಧನ್ನಿಪುರ ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ ಮಸೀದಿ ಕಟ್ಟಲಾಗುತ್ತಿದ್ದು, ತ್ರಿವರ್ಣ ಧ್ವಜಾರೋಹಣ ಮತ್ತು ಗಿಡ ನೆಡುವ ಮೂಲಕ ಕಾಮಗಾರಿಗೆ ಮುನ್ನುಡಿ ಬರೆಯಲಾಯಿತು.

ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಇಂಡೋ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ನ ಎಲ್ಲಾ 12 ಸದಸ್ಯರು ಸ್ಥಳದಲ್ಲಿ ಹಾಜರಿದ್ದರು. ಟ್ರಸ್ಟ್‌ನ ಮುಖ್ಯಸ್ಥ ಝಫರ್‌ ಅಹಮದ್‌ ಫಾರೂಖಿ ಬೆಳಗ್ಗೆ 8.45ಕ್ಕೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟರು.

ಬಳಿಕ ಮಾತನಾಡಿದ ಫಾರೂಖಿ, ನಿರ್ಮಾಣ ಸ್ಥಳದಲ್ಲಿ ನಾವು ಇಂದಿನಿಂದ ಮಣ್ಣು ಪರೀಕ್ಷೆ ಆರಂಭಿಸಿದ್ದೇವೆ. ಹೀಗಾಗಿ ಯೋಜನೆಗೆ ತಾಂತ್ರಿಕವಾಗಿ ಚಾಲನೆ ಸಿಕ್ಕಿದೆ ಎಂದು ಹೇಳಬಹುದು. ಮೊದಲ ಹಂತದಲ್ಲಿ ನಾವು ಮಸೀದಿ ಮತ್ತು ಆಸ್ಪತ್ರೆ ನಿರ್ಮಿಸಲಿದ್ದೇವೆ. ಬಳಿಕ ಆಸ್ಪತ್ರೆಯನ್ನು ವಿಸ್ತರಿಸಲಿದ್ದೇವೆ. ಜೊತೆಗೆ ನಿತ್ಯ 1000 ಜನರಿಗೆ ಊಟ ಸಿದ್ಧಪಡಿಸುವ ಸಮುದಾಯ ಅಡುಗೆ ಕೋಣೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ರಾಮಮಂದಿರ ಇದ್ದ ಜಾಗದಲ್ಲಿ ಬಳಿಕ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿತ್ತು. ಆ ಜಾಗವನ್ನು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಪೂರ್ಣವಾಗಿ ಮಂದಿರ ನಿರ್ಮಾಣಕ್ಕೆ ಬಳಸಲು ಸೂಚಿಸಿತ್ತು. ಜೊತೆಗೆ ಬಾಬ್ರಿ ಮಸೀದಿಗೆ ಬದಲಾಗಿ ಮುಸ್ಲಿಮರಿಗೆ 5 ಎಕರೆ ಜಾಗ ನೀಡುವಂತೆ ಸೂಚಿಸಲಾಗಿತ್ತು.