ವೇಗದ ಲಸಿಕೆ: ಭಾರತ ನಂ.1| 85 ದಿನದಲ್ಲಿ 10 ಕೋಟಿ ಡೋಸ್‌|  ಅಮೆರಿಕ, ಚೀನಾ ಹಿಂದಿಕ್ಕಿದ ಭಾರತ

ನವದೆಹಲಿ(ಏ.11): ಕೊರೋನಾ ಲಸಿಕೆ ನೀಡಿಕೆಯಲ್ಲಿ ಭಾರತ ಶನಿವಾರ ಮೈಲಿಗಲ್ಲು ಸ್ಥಾಪಿಸಿದೆ. ಲಸಿಕಾ ಅಭಿಯಾನ ಆರಂಭದ 85 ದಿನದೊಳಗೆ 10 ಕೋಟಿ ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದ್ದು, ಇಷ್ಟು ವೇಗದಲ್ಲಿ 10 ಕೋಟಿ ಲಸಿಕೆ ನೀಡಿದ ಮೊದಲ ದೇಶ ಎನ್ನಿಸಿಕೊಂಡಿದೆ.

10 ಕೋಟಿ ಲಸಿಕೆ ನೀಡಲು ಅಮೆರಿಕ 89 ದಿನ ತೆಗೆದುಕೊಂಡಿತ್ತು ಹಾಗೂ ವಿಶ್ವಕ್ಕೇ ಕೊರೋನಾ ಹಬ್ಬಿಸಿದ ಅಪಖ್ಯಾತಿಗೆ ಒಳಗಾಗಿರುವ ಚೀನಾ 102 ದಿನಗಳನ್ನು ತೆಗೆದುಕೊಂಡಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 10 ಕೋಟಿ ಡೋಸ್‌ಗಳಲ್ಲಿ ಶೇ.60ರಷ್ಟುಪಾಲನ್ನು ಕರ್ನಾಟಕ ಸೇರಿದಂತೆ 8 ರಾಜ್ಯಗಳು ಪಡೆದಿವೆ.

85 ದಿನದ ಲೆಕ್ಕಾಚಾರ ಗಮನಿಸಿದರೆ ಅಮೆರಿಕದಲ್ಲಿ 9.2 ಕೋಟಿ, ಚೀನಾ ಹಾಗೂ ಬ್ರಿಟನ್‌ನಲ್ಲಿ ಕ್ರಮವಾಗಿ 6.1 ಕೋಟಿ ಹಾಗೂ 2.1 ಕೋಟಿ ಡೋಸ್‌ ನೀಡಲಾಗಿತ್ತು. ಇದೇ ವೇಳೆ ದೈನಂದಿನ ಲಸಿಕೆ ನೀಡಿಕೆಯಲ್ಲೂ ಭಾರತ ಮೊದಲ ಸ್ಥಾನಿಯಾಗಿದ್ದು, ಸರಾಸರಿ 38,93,288 ಡೋಸ್‌ಗಳನ್ನು ನೀಡಲಾಗುತ್ತದೆ.