ತಿರುಪತಿ ಭಕ್ತರ ಗಮನಕ್ಕೆ, ಬದಲಾಗಲಿದೆ ತಿರುಮಲ, ಇನ್ಮುಂದೆ ದರ್ಶನ, ವಸತಿ ಎಲ್ಲವೂ ವಿಭಿನ್ನ & ನೂತನ
ತಿರುಮಲದಲ್ಲಿ ದರ್ಶನ, ವಸತಿ ಸೇರಿದಂತೆ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ. ಟಿಟಿಡಿ ಚಾಟ್‌ಬಾಟ್, ಗುಣಮಟ್ಟದ ಸೇವೆಗಳು, ಆಧುನೀಕರಿಸಿದ ಮೂಲಸೌಕರ್ಯಗಳು ಮುಖ್ಯ ಆಕರ್ಷಣೆಗಳಾಗಿವೆ.
ತಿರುಮಲ: ಇನ್ಮುಂದೆ ತಿರುಮಲದಲ್ಲಿ ಹಲವು ಬದಲಾವಣೆಗಳು ಆಗಲಿದ್ದು, ಇದರಲ್ಲಿ ದರ್ಶನ ಹಾಗೂ ಇತರೆ ಸೇವೆಗಳು ಸೇರಿವೆ ಎಂದು ಟಿಟಿಡಿ ಇಒ ಶ್ಯಾಮಲ್ ರಾವ್ ಮಾಹಿತಿ ನೀಡಿದ್ದಾರೆ. ಚಾಟ್ ಜಿಪಿಟಿಯಂತ ಧ್ವನಿ ಆಧಾರಿತ ಟಿಟಿಡಿ ಚಾಟ್ ಬೋಟ್ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಕಳೆದ 6 ತಿಂಗಳಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ಮುಂದೆಯೂ ಸೇವೆಯ ಗುಣಮಟ್ಟ ಹೆಚ್ಚಳವಾಗಲಿದೆ ಎಂದು ಶ್ಯಾಮಲ್ ರಾವ್ ತಿಳಿಸಿದ್ದಾರೆ.
ತಿರುಮಲವನ್ನು ಸುಸಜ್ಜಿತ ಆದರ್ಶ ನಗರವನ್ನಾಗಿ ಮಾಡೋದು ತಿರುಮಲ್ ವಿಷನ್-2047 ಉದ್ದೇಶವಾಗಿದೆ. ಗುಣಮಟ್ಟದ ತುಪ್ಪದಿಂದಲೇ ಲಡ್ಡುಗಳನ್ನು ಸಿದ್ಧಪಡಿಸಿ ಭಕ್ತರಿಗೆ ವಿತರಿಸಲಾಗುತ್ತಿದೆ. ಎನ್‌ಡಿಡಿಬಿ ನೀಡಿದ 70 ಲಕ್ಷ ರೂಪಾಯಿ ಮೌಲ್ಯದ ಉಪಕರಣದಿಂದ ತುಪ್ಪದ ಶುದ್ಧತೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ನಮ್ಮಲ್ಲಿಯೇ ಪ್ರಯೋಗಾಲಯವಿದೆ ಎಂದು ಮಾಹಿತಿ ನೀಡಿದರು.
ಸಿಎಂ ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ ತಿರುಮಲಕ್ಕೆ ಆಗಮಿಸುವ ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಹೆಚ್ಚು ಸಮಯ ಕಾಯದೇ ಭಕ್ತರಿಗೆ ದರ್ಶನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ದರ್ಶನ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಮತ್ತು ಅದನ್ನು ಪರಿಶೀಲನೆಗಾಗಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗುತ್ತಿದೆ. ಇನ್ಮುಂದೆ ಕಡಿಮೆ ಸಮಯದಲ್ಲಿ ತಿರುಮಲವಾಸಿಯ ದರ್ಶನ ಸಿಗಲಿದೆ ಎಂದು ಭರವಸೆ ನೀಡಿದರು.
45 ಅತಿಥಿ ಗೃಹಗಳಿಗೆ ಆಧ್ಯಾತ್ಮಿಕ ಹೆಸರನ್ನು ನೀಡಲಾಗುವುದು. ತಿರುಮಲ ವಿಷನ್-2047ಕ್ಕೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಮತ್ತೊಂದೆಡೆ 18 ಯೋಜನೆಗಳನ್ನು ರೂಪಿಸಲು 9 ಸಮಗ್ರ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಜನವರಿಯ ತಿರುಪತಿ ದರ್ಶನದ ಟಿಕೆಟ್ ಬುಕ್ಕಿಂಗ್ ದಿನಾಂಕ ಘೋಷಿಸಿದ ಟಿಟಿಡಿ
ಈ ಯೋಜನೆಯಲ್ಲಿ ತಿರುಮಲ ಪಾದಚಾರಿ ಮಾರ್ಗಗಳ ಆಧುನೀಕರಣ, ಮಲ್ಟಿ ಲೆವೆಲ್ ಪಾರ್ಕಿಂಗ್, ಸ್ಮಾರ್ಟ್ ಪಾರ್ಕಿಂಗ್, ಹೊಸ ಸಂಪರ್ಕ ರಸ್ತೆಗಳ ನಿರ್ಮಾಣ, ಸುರಂಗಮಾರ್ಗಗಳ ನಿರ್ಮಾಣ, ರಾಮ್ ಭಾಗಿಚಾ ಮತ್ತು ಬಾಲಾಜಿ ಬಸ್ ನಿಲ್ದಾಣಗಳ ಪುನರ್ನಿರ್ಮಾಣ ಸೇರಿದೆ. ಭಕ್ತರ ವಾಸ್ತವ್ಯಕ್ಕಾಗಿ ಅಲಿಪಿರಿ ಬಳಿ 40 ಎಕರೆ ಜಾಗದಲ್ಲಿ ಬೇಸ್ ಕ್ಯಾಂಪ್ ನಿರ್ಮಿಸಲಾಗಿದೆ. ತಿರುಮಲದಲ್ಲಿ ಆಧ್ಯಾತ್ಮ ಬಿಂಬಿಸುವ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶ್ಯಾಮಲ್ ರಾವ್ ತಿಳಿಸಿದ್ದಾರೆ.
ಹಾಗೆಯೇ ತಿರುಮಲದಲ್ಲಿ ಸಂಚಾರ ನಿಯಂತ್ರಣ, ವಾಹನ ನಿಲುಗಡೆ, ಮೂಲಸೌಕರ್ಯ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಟಿಟಿಡಿಯಲ್ಲಿರುವ 31 ಹಿಂದೂಯೇತರರನ್ನು ಸರ್ಕಾರದ ಬೇರೆ ಇಲಾಖೆಗಳಿಗೆ ವರ್ಗಾಯಿಸುವಂತೆ ಅಥವಾ ವಿಆರ್‌ಎಸ್ ನೀಡಲು ನಿರ್ಧರಿಸಲಾಗಿದೆ. ಟಿಟಿಡಿ ವ್ಯಾಪ್ತಿಯಲ್ಲಿರುವ 61 ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.
ಇದನ್ನೂ ಓದಿ: ತಿರುಪತಿಯಲ್ಲಿ ಇನ್ನು ಕ್ಯೂ ನಿಲ್ಲೋ ಅಗತ್ಯವಿಲ್ಲ: ಒಂದೇ ಗಂಟೆಯಲ್ಲಿ ವೆಂಕಟೇಶನ ದರ್ಶನ- ಹೀಗಿದೆ ನೋಡಿ ವ್ಯವಸ್ಥೆ