ಬರೇಲಿ(ಸೆ.23): ಮಗು ಗಂಡೋ, ಹೆಣ್ಣೋ ಎಂದು ಪರೀಕ್ಷಿಸಲು ತನ್ನ ಪತ್ನಿಯ ಹೊಟ್ಟೆಯನ್ನೇ ಪತಿಯೊಬ್ಬ ಸೀಳಿದ್ದ ಪೈಶಾಚಿಕ ಪ್ರಕರಣ ವಿಚಿತ್ರ ರೂಪ ಪಡೆದುಕೊಂಡಿದೆ.

ಸಂತ್ರಸ್ತ ಗರ್ಭಿಣಿ ಅನಿತಾ ದೇವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ದುರದೃಷ್ಟವಶಾತ್‌ ಹೊಟ್ಟೆಯಲ್ಲಿದ್ದ ಗಂಡು ಮಗು ಗರ್ಭದಲ್ಲೇ ಕೊನೆಯುಸಿರೆಳೆದಿದೆ ಎಂದು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮಗು ಯಾವುದೆಂದು ತಿಳಿಯಲು ಪತ್ನಿಯ ಹೊಟ್ಟೆಯನ್ನೇ ಸೀಳಿದ!

ಉತ್ತರ ಪ್ರದೇಶದ ನಾಲ್ಕು ಹೆಣ್ಣುಮಕ್ಕಳ ತಂದೆ, ಪುತ್ರ ವ್ಯಾಮೋಹಿ ಪನ್ನಲಾಲ್‌ ಎಂಬ ವ್ಯಕ್ತಿ ಶನಿವಾರ ಕಂಠ ಪೂರ್ತಿ ಕುಡಿದು ಬಂದು ಭ್ರೂಣವನ್ನು ತೆಗೆಸುವಂತೆ ಪತ್ನಿಯೊಂದಿಗೆ ಜಗಳವಾಡಿದ್ದ. ಆದರೆ ಅನಿತಾ ಭ್ರೂಣ ಹತ್ಯೆಗೆ ಒಪ್ಪಿರಲಿಲ್ಲ. ಇದರಿಂದ ಕ್ರೋಧಗೊಂಡ ಪನ್ನಲಾಲ್‌ ಮಗು ಗಂಡೋ, ಹೆಣ್ಣೋ ಎಂದು ತಿಳಿಯಲು 6 ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಯನ್ನೇ ಸೀಳಿ ಪೈಶಾಚಿಕತೆ ಮೆರೆದಿದ್ದ. ಸಂತ್ರಸ್ತ ಗರ್ಭಿಣಿ ಅನಿತಾ ದೇವಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.