ತಿರುವನಂತಪುರ[ಫೆ.24]: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 14 ವಿದೇಶೀ ನಿರ್ಮಿತ ಸಜೀವ ಗುಂಡುಗಳು ಪತ್ತೆಯಾಗಿವೆ. ಇವು ಪಾಕಿಸ್ತಾನಿ ನಿರ್ಮಿತ ಗುಂಡುಗಳು ಆಗಿರಬಹುದು ಎಂಬ ಶಂಕೆ ಇದೆ. ಹೀಗಾಗಿ ತನಿಖೆಯನ್ನು ಕೇರಳ ಸರ್ಕಾರವು ಕೇರಳ ಪೊಲೀಸರ ಭಯೋತ್ಪಾದಕ ನಿಗ್ರಹ ದಳಕ್ಕೆ ತನಿಖೆಯನ್ನು ಒಪ್ಪಿಸಿದೆ. ಇದೇ ವೇಳೆ, ತನಿಖೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ಮತ್ತು ಇತರ ರಾಜ್ಯಗಳ ಸಹಕಾರವನ್ನು ಕೂಡ ಬಯಸಲಾಗಿದೆ.

ಪ್ಯಾಕ್‌ನಲ್ಲಿ ಇಡಲಾಗಿದ್ದ 14 ಗುಂಡುಗಳನ್ನು ಕೊಲ್ಲಂ ಜಿಲ್ಲೆಯ ಕುಳತುಪ್ಪುಳ ಎಂಬಲ್ಲಿ ಇಬ್ಬರು ನಾಗರಿಕರು ಶನಿವಾರ ಪತ್ತೆ ಮಾಡಿದ್ದರು. ಭಾನುವಾರ ಸೇನಾ ಗುಪ್ತಚರ ಇಲಾಖೆಯ ಇಬ್ಬರು ಸದಸ್ಯರು ಇವುಗಳ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಇವು ವಿದೇಶೀ ನಿರ್ಮಿತ ಎಂದು ಕಂಡುಬಂದಿದೆ.

ಬುಲೆಟ್‌ಗಳ ಮೇಲೆ ಪಿಒಎಫ್‌ ಎಂದು ಬರೆಯಲಾಗಿದೆ. ಹೀಗಾಗಿ ಇವುಗಳನ್ನು ಪಾಕಿಸ್ತಾನ ಆರ್ಡಿನನ್ಸ್‌ ಫ್ಯಾಕ್ಟರಿ (ಪಿಒಎಫ್‌)ನಲ್ಲಿ ತಯಾರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ತನಿಖೆಯಲ್ಲಿ ಇತರ ರಾಜ್ಯಗಳ ಸಹಕಾರ ಬಯಸಲಾಗಿದೆ ಎಂದು ಕೇರಳ ಡಿಜಿಪಿ ಲೋಕನಾಥ್‌ ಬೆಹೆರಾ ಹೇಳಿದ್ದಾರೆ. ಆದರೆ ಯಾವ ರಾಜ್ಯಗಳೆಂದು ತಿಳಿಸಲಿಲ್ಲ. ಬಹುಶಃ ಕೇರಳಕ್ಕೆ ಹೊಂದಿಕೊಂಡಿರುವ ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರ ಸಹಕಾರ ಬಯಸಲಾಗಿದೆ ಎಂದು ಊಹಿಸಲಾಗಿದೆ.