ಪ್ರಧಾನಿ ನರೇಂದ್ರ ಮೋದಿ ಸಂಜೆ 5.30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೂಲಗಳ ಪ್ರಕಾರ ಸಿಎಎ ಜಾರಿಯ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.
ನವದೆಹಲಿ (ಮಾ.11): ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಸಂಜೆ 5.30ಕ್ಕೆ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಮೂಲಗಳ ಪ್ರಕಾರ ಇಂದು ರಾತ್ರಿಯಿಂದಲೇ ಬಹುನಿರೀಕ್ಷಿತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನು ಸ್ವತಃ ಪ್ರಧಾನಿ ಮೋದಿಯೇ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಪಿಎಂ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಸೂಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದು ದೃಢಪಟ್ಟಿಲ್ಲವಾದರೂ ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಪಿಟಿಐ ಮೂಲಗಳ ಪ್ರಕಾರ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ದೇಶಗಳಿಗೆ ಪೌರತ್ವ ನೀಡಲು ಅನುಕೂಲವಾಗುವಂತೆ ಸಿಎಎ ನಿಯಮಗಳನ್ನು ಹೊಂದಿದೆ.
ಅಮಿತ್ ಷಾ ಕಾರಿನ ನಂಬರ್ ಪ್ಲೇಟ್‌ನಲ್ಲೂ ಸಿಎಎ: ಕಾಯ್ದೆ ಜಾರಿಗೂ ಮೊದಲು ಫೋಟೋ ಸಖತ್ ವೈರಲ್
ಸಿಎಎ ನಿಯಮಗಳು ಜಾರಿಯಾದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ರ ಒಳಗಾಗಿ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವವನ್ನು ನೀಡಲು ಆರಂಭಿಸಲಿದೆ. ಆದರೆ, ಈ ನಿಯಮ ನೆರೆಯ ದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂಮರಿಗೆ ಅನ್ವಯ ಆಗೋದಿಲ್ಲ.
ಪೌರತ್ವ ತಿದ್ದುಪಡಿ ಮಸೂದೆ ಮಾರ್ಚ್‌ನಲ್ಲಿ ಜಾರಿ, ಕೇಂದ್ರ ಸರ್ಕಾರದ ಸೂಚನೆ
ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, 2021ರ ಏಪ್ರಿಲ್ 1 ರಿಂದ 2021ರ ಡಿಸೆಂಬರ್ 31ರವರೆಗೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಒಟ್ಟು 1,414 ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ನೋಂದಣಿ ಅಥವಾ ನ್ಯಾಚುರಲೈಜೇಷನ್ ಮೂಲಕ ಭಾರತೀಯ ಪೌರತ್ವವನ್ನು ನೀಡಲಾಗಿದೆ. ದೇಶದಾದ್ಯಂತ ಭಾರೀ ಪ್ರತಿಭಟನೆಗಳ ನಡುವೆ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕಾರ ಮಾಡಲಾಗಿತ್ತು. ಅದರೊಂದಿಗೆ ಭಾರತದ ಪೌರತ್ವವನ್ನು ಪಡೆಯಲು ಧರ್ಮ ಕೂಡ ಪ್ರಮುಖ ಅಂಶ ಎಂದು ಹೇಳಲಾಗಿತ್ತು. ಮೂರು ಮುಸ್ಲಿಂ ಪ್ರಾಬಲ್ಯವಿರುವ ನೆರೆಯ ದೇಶಗಳ ಮುಸ್ಲಿಮೇತರ ನಿರಾಶ್ರಿತರು ಧಾರ್ಮಿಕ ಕಿರುಕುಳದ ಕಾರಣದಿಂದ ಭಾರತಕ್ಕೆ ಆಶ್ರಯಕ್ಕಾಗಿ ಬಂದಲ್ಲಿ ಅವರಿಗೆ ಸರ್ಕಾರದ ಸಹಾಯ ಸಿಗಲಿದೆ ಎಂದು ಸರ್ಕಾರ ಹೇಳಿತ್ತು.
