ಗುವಾಹಟಿ[ಡಿ.12]: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ಜನರ ಆಕ್ರೋಶ ಭುಗಿಲೆದ್ದಿದ್ದು, ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಟೈರ್‌ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಸಚಿವಾಲಯದ ಮುಂದೆ ಭದ್ರತಾ ಪಡೆಗಳ ಜೊತೆ ಕಾದಾಟಕ್ಕೆ ಇಳಿದಿದ್ದಾರೆ. ಧರ್ಮಾಧರಿತ ಪೌರತ್ವ ನೀಡಿಕೆ ವಿರೋಧಿಸಿ ಹಾಗೂ ಅಸ್ಸಾಂ ಒಪ್ಪಂದ ಮುಂದುವರಿಕೆಗೆ ಆಗ್ರಹಿಸಿ ನಡೆದ 6 ವರ್ಷಗಳ ಹಿಂಸಾತ್ಮಕ ವಿದ್ಯಾರ್ಥಿ ಚಳವಳಿಯ ಬಳಿಕ ವಿದ್ಯಾರ್ಥಿಗಳು ಬೃಹತ್‌ ಮಟ್ಟದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು.

ಪ್ರತಿಭಟನೆ ಹಿಂಸಾತ್ಮ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಲಾಠಿಪ್ರಹಾರ ಮಾಡಿದ್ದಾರೆ. ಈ ಮಧ್ಯೆ ಗುವಾಹಟಿಯಲ್ಲಿ ಕಪ್ರ್ಯೂ ಜಾರಿಗೊಳಿಸಲಾಗಿದ್ದು, ಅಸ್ಸಾಂನ 10 ಜಿಲ್ಲೆಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ಸಿಎಂಗೂ ಬಿಸಿ: ಪ್ರತಿಭಟನೆಯ ಬಿಸಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್‌ ಅವರಿಗೂ ತಟ್ಟಿದೆ. ತೇಜ್‌ಪುರನಿಂದ ಗುವಾಹಟಿಗೆ ಆಗಮಿಸಿದ್ದ ಸೋನಾವಾಲ್‌, ವಿಮಾನ ನಿಲ್ದಾಣದಿಂದ ಹೊರಬರಲಾಗದೇ ಗಂಟೆಗಳ ಕಾಲ ಅಲ್ಲೇ ಇರಬೇಕಾದ ಸನ್ನಿವೇಶವನ್ನು ಎದುರಿಸಿದರು. ಬಳಿಕ ಪ್ರತಿಭಟನಾಕಾರನ್ನು ಚದುರಿಸಿ ಸಿಎಂ ವಾಹನಕ್ಕೆ ಅನುವು ಮಾಡಿಕೊಡಲಾಯಿತು.

ಸೇನೆ ನಿಯೋಜನೆ: ಈಶಾನ್ಯ ರಾಜ್ಯಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಮೊದಲೇ ಅರೆಸೇನಾಪಡೆಯ 5000 ಸಿಬ್ಬಂದಿ ನಿಯೋಜಿಸಿದ್ದ ಕೇಂದ್ರ ಸರ್ಕಾರ, ಬುಧವಾರ ಹೆಚ್ಚುವರಿಯಾಗಿ ಸೇನೆಯನ್ನೂ ನಿಯೋಜಿಸಿದೆ.