ಐಜ್ವಾಲ್‌/ಸಿಲ್ಚಾರ್‌/ಗುವಾಹಟಿ(ಅ.19): ಅಸ್ಸಾಂ ಮತ್ತು ಮಿಜೋರಾಂ ಗಡಿ ಭಾಗದ ಎರಡು ಗ್ರಾಮಗಳ ಜನರ ನಡುವಿನ ಗಲಾಟೆಯಿಂದಾಗಿ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯಲ್ಲಿ ಹಲವಾರು ಜನ ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಕುರಿತು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ. ಮತ್ತೊಂದೆಡೆ ಕೇಂದ್ರ ಗೃಹ ಸಚಿವಾಲಯವು ಸೋಮವಾರ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮಟ್ಟದ ಸಭೆ ಆಯೋಜನೆ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಕೆಲಸಕ್ಕೆ ಮುಂದಾಗಿದೆ.

ಆಗಿದ್ದೇನು?: ಮಿಜೋರಾಂನ ಕೊಲಾಸಿಬ್‌ ಜಿಲ್ಲೆಯ ವೈರೆಂಗ್ಟೆಗ್ರಾಮ ಮತ್ತು ಅಸ್ಸಾಂ ಕಾಚರ್‌ ಜಿಲ್ಲೆಯ ಲೈಲಾಪುರ ಗ್ರಾಮಗಳು ಉಭಯ ರಾಜ್ಯದ ಗಡಿಯನ್ನು ಹಂಚಿಕೊಂಡಿವೆ. ಶನಿವಾರ ಸಂಜೆ ಗಡಿ ಬಳಿಯ ಹೆದ್ದಾರಿಯಲ್ಲಿ ವೈರೆಂಗ್ಟೆಗ್ರಾಮಸ್ಥರ ಗುಂಪಿನ ಮೇಲೆ ಅಸ್ಸಾಂ ಗಡಿ ಗ್ರಾಮಸ್ಥರು ಲಾಠಿ ಪ್ರಹಾರ ಹಾಗೂ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಕ್ರೋಧಗೊಂಡ ವೈರೆಂಗ್ಟೆಗ್ರಾಮಸ್ಥರು ಗುಂಪು-ಗುಂಪಾಗಿ ಅಸ್ಸಾಂ ಲೈಲಾಪುರ ಗ್ರಾಮಕ್ಕೆ ನುಗ್ಗಿ 20 ಬಿದುರಿನ ಗುಡಿಸಲುಗಳು ಹಾಗೂ ಅಂಗಡಿಗಳಿಗೆ ಬೆಂಕಿ ಇಟ್ಟಿದ್ದಾರೆ. ಹಲವು ತಾಸು ನಡೆದ ಈ ಮಾರಾಮಾರಿಯಲ್ಲಿ ಎರಡೂ ಪಕ್ಷಗಳ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇಗುಲ ಗಲಾಟೆ: ಮತ್ತೊಂದೆಡೆ ತ್ರಿಪುರಾ ಮತ್ತು ಮಿಜೋರಾಂ ನಡುವೆಯೂ ಗಡಿ ಪ್ರದೇಶ ಸಂಬಂಧ ವಿವಾದ ಉಂಟಾಗಿದೆ. ಉಭಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಬರುವ ಪೂಲ್‌ಡುಂಗ್ಸಾಯ್‌ ಎಂಬ ಗ್ರಾಮದಲ್ಲಿ ತ್ರಿಪುರಾದ ಆದಿವಾಸಿಗಳ ಸಮುದಾಯದ ಜನ ದೇಗುಲವೊಂದರ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಇದು ತನಗೆ ಸೇರಿದ ಪ್ರದೇಶವಾಗಿದ್ದು, ಅಲ್ಲಿ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಮಿಜೋರಾಂ ಸರ್ಕಾರ, ತ್ರಿಪುರಾ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದೆ.