ನವದೆಹಲಿ(ಏ.29): ಕೊರೋನಾ ವ್ಯಾಧಿಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯೋಧರೊಬ್ಬರು ಬಲಿಯಾಗಿದ್ದಾರೆ. 10 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ದೇಶದ ವಿವಿಧ ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಕೊರೋನಾಗೆ ಸಿಬ್ಬಂದಿಯೊಬ್ಬರು ಬಲಿಯಾಗುತ್ತಿರುವುದು ಇದೇ ಮೊದಲು.'

ಪ್ಲಾಸ್ಮಾ ಚಿಕಿತ್ಸೆಗೆ ಒಬ್ಬ ರೋಗಿಯೂ ಸಿಗುತ್ತಿಲ್ಲ!

ಸಿಆರ್‌ಪಿಎಫ್‌ನಲ್ಲಿ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ) ಶ್ರೇಣಿಯಲ್ಲಿದ್ದ 55 ವರ್ಷದ ಈ ಯೋಧ, ದಿಲ್ಲಿಯ ಸಪ್ದರ್‌ಜಂಗ್‌ ಆಸ್ಪತ್ರೆಗೆ ಕೊರೋನಾ ಸೋಂಕಿನಿಂದಾಗಿ ದಾಖಲಾಗಿದ್ದರು. ಆದರೆ ಮಂಗಳವಾರ ಅವರು ಮೃತಪಟ್ಟರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಈವರೆಗೂ ಸಿಆರ್‌ಪಿಎಫ್‌ನ 31ನೇ ಬೆಟಾಲಿಯನ್‌ನಲ್ಲಿ 23 ಮಂದಿಗೆ ಕೊರೋನಾ ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹೋದ್ಯೋಗಿಯೊಬ್ಬನಿಂದ ಇವರಿಗೆ ಸೋಂಕು ತಗುಲಿದೆ.

ಬಿಎಸ್‌ಎಫ್‌, ಸಿಐಎಸ್‌ಎಫ್‌ ಅರೆಸೇನಾ ಪಡೆಗಳಲ್ಲಿ ಕೂಡ ಸೋಂಕು ದೃಢಪಟ್ಟಿದೆ. ಸಿಆರ್‌ಪಿಎಫ್‌ ಒಂದರಲ್ಲೇ 3.25 ಲಕ್ಷ ಸಿಬ್ಬಂದಿ ಇದ್ದಾರೆ. ಇವರು ಹೆಚ್ಚಾಗಿ ನಕ್ಸಲ್‌ ನಿಗ್ರಹ ಹಾಗೂ ಕಾಶ್ಮೀರದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಾರೆ.

40ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್

ಘಟನೆ ಬೆನ್ನಲ್ಲೇ 40ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸಿಆರ್ ಪಿಎಫ್ ಇತ್ತೀಚೆಗೆ ಕೊರಂಟೈನ್ ಸಮಯವನ್ನು ಐದು ದಿನಗಳಿಗೆ ಇಳಿಕೆ ಮಾಡಿ ಆದೇಶ ಮಾಡಿತ್ತು. ಹೀಗಾಗೇ ಈ ಎಡವಟ್ಟು ಸಂಭವಿಸಿದೆ ಎನ್ನಲಾಗಿದೆ.  ಹೀಗಿರುವಾಗ ಮೇ.1ರೊಳಗೆ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆ ಖಡಕ್ ಸೂಚನೆ ನೀಡಿದೆ.