ಲವ್ ಜಿಹಾದ್ ಮದುವೆಯಾದ್ರೆ ಇಲ್ಲ ಮಾನ್ಯತೆ! ಮದ್ರಸಾ, ಸಂಸ್ಕೃತ ಪಾಠಶಾಲೆಗಳು ಬಂದ್
ಒಂದು ವೇಳೆ ಲವ್ ಜಿಹಾದ್ ಮದುವೆಯಾದರೆ ಅದಕ್ಕೆ ಮಾನ್ಯತೆ ಇಲ್ಲ. ಇನ್ನು ಸಂಸ್ಕೃತ ಪಾಠಶಾಲೆಗಳಿಗೂ, ಮದ್ರಸಾಗಳಿಗೂ ಮಾನ್ಯತೆ ರದ್ದಾಗುತ್ತೆ
ಗುವಾಹಟಿ (ಅ.16): ಅಸ್ಸಾಂನಲ್ಲಿ ಸರ್ಕಾರಿ ಹಾಗೂ ಅನುದಾನಿತ ಮದರಸಾಗಳನ್ನು ಬಂದ್ ಮಾಡಲು ಹಾಗೂ ‘ಲವ್ ಜಿಹಾದ್’ ಮೂಲಕ ನಡೆದ ಮದುವೆಗಳನ್ನು ರದ್ದುಪಡಿಸಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಇದೇ ವೇಳೆ, ಸರ್ಕಾರಿ ಹಾಗೂ ಅನುದಾನಿತ ಸಂಸ್ಕೃತ ಪಾಠಶಾಲೆಗಳನ್ನೂ ಮುಚ್ಚಲು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ವೆಚ್ಚದಲ್ಲಿ ಯಾವುದೇ ಧಾರ್ಮಿಕ ಶಿಕ್ಷಣ ನೀಡುವುದಿಲ್ಲ ಎಂದು ಪ್ರಕಟಿಸಿದೆ.
ಮೋಸದ ಮದುವೆಗೆ ಬ್ರೇಕ್: ‘ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಮೋಸದ ಮದುವೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಹಳಷ್ಟುಮುಸ್ಲಿಂ ಯುವಕರು ಫೇಸ್‌ಬುಕ್‌ನಲ್ಲಿ ಹಿಂದು ಹೆಸರಿನಲ್ಲಿ ಪ್ರೊಫೈಲ್ ಸೃಸ್ಟಿಸಿಕೊಳ್ಳುತ್ತಾರೆ. ಅದರಲ್ಲಿ ದೇವಸ್ಥಾನದಲ್ಲಿ ನಿಂತಿರುವ ಫೋಟೋ ಪೋಸ್ಟ್ ಮಾಡುತ್ತಾರೆ. ನಂತರ ಹಿಂದು ಹುಡುಗಿಯರನ್ನು ಬಲೆಗೆ ಬೀಳಿಸಿಕೊಂಡು ಮದುವೆಯಾಗುತ್ತಾರೆ. ಆ ಯುವತಿಗೆ ಮದುವೆಯಾದ ನಂತರವಷ್ಟೇ ತಾನು ಮೋಸಹೋಗಿದ್ದೇನೆ ಎಂಬುದು ಗೊತ್ತಾಗುತ್ತದೆ. ಇದು ವಂಚನೆಯ ಮದುವೆ. ನಮ್ಮ ಸರ್ಕಾರ ಅನ್ಯಧರ್ಮೀಯ ಮದುವೆಗೆ ವಿರುದ್ಧವಾಗಿಲ್ಲ. ಆದರೆ, ವಂಚನೆಯ ಮದುವೆಯಿಂದ ನಮ್ಮ ಸೋದರಿಯರು ಮತ್ತು ಹೆಣ್ಮಕ್ಕಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಇಂತಹ ಮದುವೆಗಳು ಮುಸ್ಲಿಂ ಸಂಪ್ರದಾಯದಂತೆ ನಡೆದಿದ್ದರೂ ಅವುಗಳನ್ನು ರದ್ದುಪಡಿಸಲಾಗುವುದು’ ಎಂದು ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ದಿನೇಶ್ ಕಾರ್ತಿಕ್ -ಹಾರ್ದಿಕ್ ಪಾಂಡ್ಯ: ಬೇರೆ ಧರ್ಮೀಯರನ್ನು ವರಿಸಿದ ಕ್ರಿಕೆಟರ್ಸ್! ..
‘ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಮದರಸಾಗಳನ್ನು ಹಾಗೂ ಸಂಸ್ಕೃತ ಶಾಲೆಗಳನ್ನು ಮುಚ್ಚಲಾಗುವುದು. ಸರ್ಕಾರದ ವೆಚ್ಚದಲ್ಲಿ ಧಾರ್ಮಿಕ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಈ ಹಿಂದೆಯೇ ವಿಧಾನಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೇವೆ. ಖಾಸಗಿ ಮದರಸಾ ಮತ್ತು ಸಂಸ್ಕೃತ ಶಾಲೆಗಳ ಬಗ್ಗೆ ನಾವೇನೂ ಹೇಳುವುದಿಲ್ಲ’ ಎಂದು ಶರ್ಮಾ ತಿಳಿಸಿದ್ದಾರೆ.
ರಾಜ್ಯದಲ್ಲಿ 614 ಸರ್ಕಾರ ಮದರಸಾಗಳು ಹಾಗೂ ಸುಮಾರು 1000 ಸಂಸ್ಕೃತ ಪಾಠಶಾಲೆಗಳಿವೆ. ಮದರಸಾಗಳನ್ನು ಮುಚ್ಚಿದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಮತ್ತು ನಾವು ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಅವುಗಳನ್ನು ತೆರೆಯಲಾಗುವುದು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಪಕ್ಷದ ಸಂಸದ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.