ಹೈದರಾಬಾದ್(ಜ.29): ದೇಶ ವಿರೋಧಿಗಳಿಗೆ ಗುಂಡು ಹೊಡೆಯಬೇಕು ಎಂಬ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆಯನ್ನು ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಖಂಡಿಸಿದ್ದಾರೆ.

ಕೇಂದ್ರ ಸಚಿವರಿಗೆ ಗುಂಡು ಹೊಡೆಯವ ಬಯಕೆ ಇದ್ದರೆ ಅವರು ಹೇಳಿದ ಸ್ಥಳಕ್ಕೆ ಹೋಗಿ ಎದೆಯೊಡ್ಡುತ್ತೇನೆ ಎಂದು ಅಸದುದ್ದೀನ್ ಒವೈಸಿ ಗುಡುಗಿದ್ದಾರೆ.

ಸಿಎಎ ವಿರೋಧಿಗಳನ್ನು ದೇಶದ್ರೋಹಿಗಳೆಂದು ಕರೆದು ಅವರಿಗೆ ಗುಂಡಿಕ್ಕುವಂತೆ ಅನುರಾಗ್ ಠಾಕೂರ್ ಹೇಳಿದ್ದಾರೆ. ಅವರ ಬಯಕೆಯಂತೆ ನಾನು ಅವರ ಗುಂಡಿಗೆ ಎದೆಯೊಡ್ಡುವುದಾಗಿ ಒವೈಸಿ ಹೇಳಿದ್ದಾರೆ.

ಸಿಎಎ ವಿರೋಧಿ ಹೋರಾಟ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಗುಂಡು ಹೊಡೆದು ಈ ಹೋರಾಟವನ್ನು ಅಂತ್ಯಗೊಳಿಸುವುದು ಮೋದಿ ಸರ್ಕಾರದ ಬಯಕೆಯಾಗಿದೆ ಎಂದು ಒವೈಸಿ ಕಿಡಿಕಾರಿದರು.

ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

ಈ ದೇಶದ ಅಕ್ಕ-ತಂಗಿಯರು ಸಿಎಎ ವಿರೋಧಿಸಿ ಬೀದಿಗಿಳಿದಿದ್ದು, ನಮ್ಮ ಹೋರಾಟಕ್ಕೆ ಜಯ ಶತಸಿದ್ಧ ಎಂದು ಈ ವೇಳೆ ಒವೈಸಿ ಭರವಸೆ ವ್ಯಕ್ತಪಡಿಸಿದರು.

ಸಿಎಎ ವಿರೋಧಿಗಳು ದೇಶ ದ್ರೋಹಿಗಳಾಗಿದ್ದು, ಅವನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ದೆಹಲಿ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.