ಚೆನ್ನೈ(ಫೆ.08): ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷ ಸೆರೆವಾಸ ಅನುಭವಿಸಿದ ಮಾಜಿ ಸಿಎಂ ಜಯಲಲಿತಾರ ಆಪ್ತೆ ಶಶಿಕಲಾ ಅವರು ತಮಿಳುನಾಡಿಗೆ ಸೋಮವಾರ ಆಗಮಿಸುತ್ತಿದ್ದಾರೆ. ಇದಕ್ಕೆ ಕೆಲವೇ ತಾಸು ಮುನ್ನ ಭಾನುವಾರ ಅವರ ಆಪ್ತರಾದ ಜೆ. ಇಳವರಸಿ ಮತ್ತು ವಿ. ಎನ್‌. ಸುಧಾಕರನ್‌ ಅವರ ಆಸ್ತಿಯನ್ನು ತಮಿಳುನಾಡು ಸರ್ಕಾರ ಜಪ್ತಿ ಮಾಡಿದೆ.

2017ರ ಸುಪ್ರೀಂ ಕೋರ್ಟ್‌ ಆದೇಶದನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ತನ್ಮೂಲಕ ಶಶಿಕಲಾ ಅವರಿಗೆ ಶಾಕ್‌ ನೀಡಿದೆ.

ಈವರೆಗೆ ಕೊರೋನಾ ಕಾರಣಕ್ಕೆ ದೇವನಹಳ್ಳಿಯ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಶಶಿಕಲಾ ಅವರು ಸೋಮವಾರ ರಸ್ತೆ ಮಾರ್ಗವಾಗಿ ಚೆನ್ನೈಗೆ ಆಗಮಿಸಲಿದ್ದಾರೆ. ಇದರ ಹಿಂದಿನ ದಿನವಾದ ಭಾನುವಾರ ಶಶಿಕಲಾರ ಆಪ್ತರಿಗೆ ಸೇರಿದ ಚೆನ್ನೈನಲ್ಲಿರುವ 6 ಸಾವಿರ ಚದರ ಅಡಿಯ ಜಾಗ ಮತ್ತು 4300 ಚದರಡಿಯಲ್ಲಿ ನಿರ್ಮಿಸಲಾದ ಕಟ್ಟಡ ಸೇರಿ ಇನ್ನಿತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ