ಮುಂಬೈ(ಏ.19): ದೇಶದಲ್ಲಿ ಕೊರೋನಾ ವೈರಸ್‌ ಅಲೆ ಅಬ್ಬರ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿ ದಿನ ಲಕ್ಷಾಂತರ ಮಂದಿಗೆ ಈ ಸೋಂಕು ತಗುಲುತ್ತಿದ್ದು, ಸಾವಿರಾರು ಮಂದಿ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಹೀಗಿರುವಾಗ ಈ ಪರಿಸ್ಥಿತಿ ಬಗ್ಗೆ ಗಾಯಕ ಸೋನು ನಿಗಮ್ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯಲ್ಲೊಬ್ಬರು ಕೊರೋನಾ ಸೋಂಕಿತರಾಗಿದ್ದಾರೆಂಬ ಮಾಹಿತಿ ನೀಡಿದ ಸೋನು ನಿಗಮ್ ನಮ್ಮ ದೇಶ ಹಾಗೂ ಇಲ್ಲಿನ ವೈದ್ಯರ ಸ್ಥಿತಿ ಬಹಳಷ್ಟು ಕೆಡಲಾಆರಂಭಿಸಿದೆ. ಹೀಗಿರುವಾಗ ಕುಂಭ ಮೇಳ ನಡೆಯಬಾರದಿತ್ತು ಎಂದೂ ಹೇಳಿದ್ದಾರೆ.

ಸೋನು ನಿಗಮ್ ರಾತ್ರಿ ಸುಮಾರು ಮೂರು ಗಂಟೆಗೆ ವಿಡಿಯೋ ಬ್ಲಾಗ್‌ ಮಾಡಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡಿರುವ ಸೋನು ನಿಗಮ್ 'ನಾನು ಇತರರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಆದರೆ ಒಬ್ಬ ಹಿಂದೂವಾಗಿ ಕುಂಭ ಮೇಳ ಇಂತಹ ಪರಿಸ್ಥಿತಿಯಲ್ಲಿ ನಡೆಯಬಾರದಿತ್ತು ಎಂಬುವುದು ನನ್ನ ಅನಿಸಿಕೆ. ಆದರೆ ಸಕಾಲದಲ್ಲಿ ಜ್ಞಾನೋದಯವಾಗಿ ಸಾಂಕೇತಿಕವಾಗಿ ಇದನ್ನು ಆಚರಿಸುವಂತೆ ಆದೇಶಿಸಿದ್ದು, ಒಳ್ಳೆಯ ವಿಚಾರ. ನನಗೆ ಭಕ್ತಿಯ ಅರಿವಿದೆ. ಆದರೆ ಸದ್ಯಕ್ಕೀಗ ಜನರ ಜೀವಕ್ಕಿಂತ ಹೆಚ್ಚು ಬೇರೊಂದಿಲ್ಲ' ಎಂದಿದ್ದಾರ.

ನಮಗೂ ಶೋ ಮಾಡಬೇಕೆಂದು ಮಾಡಲು ಇಷ್ಟವಾಗುತ್ತದೆ ಎಂದು ನಿಮಗನಿಸುತ್ತಿಲ್ವಾ? ಆದರೆ ಶೋ ನಡೆಯಬಾರದೆಂದು ನನಗೆ ಅರ್ಥವಾಗುತ್ತದೆ. ಒಬ್ಬ ಗಾಯನಾಗಿ ಹೇಳುತ್ತೇನೆ, ಸಾಮಾಜಿಕ ಅಂತರವಿಟ್ಟುಕೊಂಡು ನಡೆಯುವ ಕಾರ್ಯಕ್ರಮಗಳು ನಡೆಯಹುದು. ಆದರೀಗ ಪರಿಸ್ಥಿತಿ ಬಹಳ ಹದಗೆಟ್ಟಿದೆ ಎಂದಿದ್ದಾರೆ. ಇದೇ ವೆಳೆ ಉದ್ಯೋಗದ ಬಗ್ಗೆಯೂ ಮಾತನಾಡಿರುವ ಅವರು, ಕೊರೋನಾದಿಂದಾಗಿ ಅನೇಕ ಮಂದಿ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಹಾಗೆಂದು ಕೊರೋನಾವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಇದೇ ವೇಳೆ ತಮ್ಮ ಸೀನಿಯರ್ ಹಾಗೂ ಪತ್ನಿಗೆ ಕೊರೋನಾ ಸೋಂಕು ತಗುಲಿದೆ ಎಂಬುವುದನ್ನೂ ತಿಳಿಸಿದ್ದಾರೆ.