* ಶಾರುಖ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ* ಆರೋಪ ಹಿನ್ನೆಲೆ ಸಮೀರ್‌, ಎನ್‌ಸಿಬಿ ಕೋರ್ಟ್‌ಗೆ* 25 ಕೋಟಿ ಸುಲಿಗೆ: ಸಮೀರ್‌ ವಿರುದ್ಧ ತನಿಖೆ

ಮುಂಬೈ(ಅ.26): ನಟ ಶಾರುಖ್‌ ಖಾನ್‌(Shhah Rukh Khan) ಅವರ ಪುತ್ರ ಆರ್ಯನ್‌ ಖಾನ್‌(Aryan Khan) ಡ್ರಗ್ಸ್‌ ಪ್ರಕರಣದಿಂದ(Drugs Case) ಬಿಡುಗಡೆ ಮಾಡಲು 25 ಕೋಟಿ ರು. ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಪ್ರಕರಣದ ತನಿಖಾಧಿಕಾರಿ ಸಮೀರ್‌ ವಾಂಖೇಡೆ(Sameer Wankhede) ವಿರುದ್ಧ ಸ್ವಯಂ ತನಿಖೆ ನಡೆಸಲು ಎನ್‌ಸಿಬಿ ನಿರ್ಧರಿಸಿದೆ. ಎನ್‌ಸಿಬಿಯಲ್ಲಿ(NCB) ‘ಜಾಗೃತ ದಳ’ ಇದ್ದು, ಅದರ ಮುಖ್ಯಸ್ಥ ಜ್ಞಾನೇಶ್ವರ ಸಿಂಗ್‌ ಅವರು ತನಿಖೆ ಕೈಗೊಳ್ಳಲಿದ್ದಾರೆ.

ಈ ನಡುವೆ ಸಮೀರ್‌ ವಾಂಖೇಡೆ ಅವರು, ತಮ್ಮ ವಿರುದ್ಧ ಕೇಳಿಬರುತ್ತಿರುವ ಸುಲಿಗೆ ಆರೋಪಗಳ ವಿರುದ್ಧ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ. ‘ನನ್ನ ವಿರುದ್ಧ ಒಳಸಂಚು ನಡೆದಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿರುವ ನನ್ನ ವಿರುದ್ಧ ವೈಯಕ್ತಿಕ ತೇಜೋವಧೆ ನಡೆಸಲಾಗುತ್ತಿದೆ. ಒಬ್ಬ ದೊಡ್ಡ ರಾಜಕೀಯ ವ್ಯಕ್ತಿಯ ಅಳಿಯ ಸಮೀರ್‌ ಖಾನ್‌(Sameer Khan) ಎಂಬಾತನನ್ನು ಡ್ರಗ್ಸ್‌ ಕೇಸಿನಲ್ಲಿ ಬಂಧಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅರ್ಜಿಯ ವಿಚಾರಣೆಗೆ ಮತ್ತು ಯಾವುದೇ ಆದೇಶ ಹೊರಡಿಸಲು ನಿರಾಕರಿಸಿದ ಕೋರ್ಟ್‌, ಹೈಕೋರ್ಟ್‌ ಮೊರೆ ಹೋಗುವಂತೆ ಸೂಚಿಸಿತು.

ನನ್ನ ತಂದೆ ಹಿಂದೂ, ತಾಯಿ ಮುಸ್ಲಿಂ: ವಾಂಖೇಡೆ

ಮುಂಬೈ: ‘ಎನ್‌ಸಿಬಿ ಅಧಿಕಾರಿ(NCB Officer) ಸಮೀರ್‌ ವಾಂಖೇಡೆ ಅವರ ತಂದೆ-ತಾಯಿ ಬೇರೆ ಬೇರೆ ಧರ್ಮಕ್ಕೆ ಸೇರಿದವರು’ ಎಂದು ಎನ್‌ಸಿಪಿ ಸಚಿವ ನವಾಬ್‌ ಮಲಿಕ್‌ ಟ್ವೀಟರ್‌ನಲ್ಲಿ ಕಾಗದಪತ್ರವೊಂದನ್ನು ಬಹಿರಂಗಪಡಿಸಿರುವುದಕ್ಕೆ ವಾಂಖೇಡೆ ಕಿಡಿಕಾರಿದ್ದಾರೆ.

‘ನನ್ನ ವೈಯಕ್ತಿಕ ವಿಷಯ ಕೆದಕುವುದು ಸರಿಯಲ್ಲ. ಹೌದು ನನ್ನ ತಂದೆ ಹಿಂದೂ. ತಾಯಿ ಮುಸ್ಲಿಂ. ಇನ್ನು ಮುಸ್ಲಿಮಳನ್ನು ಮದುವೆಯಾಗಿ ನಾನು ಹಿಂದೆ ವಿಚ್ಛೇದನ ನೀಡಿದೆ. ಬಳಿಕ ಮರಾಠಿ ನಟಿಯೊಬ್ಬಳನ್ನು ಮದುವೆಯಾಗಿ ಜೀವಿಸುತ್ತಿದ್ದೇನೆ. ಜಾತ್ಯತೀತತೆಯನ್ನು ಎತ್ತಿ ಹಿಡಿದ ಕುಟುಂಬ ನಮ್ಮದು. ಆದರೆ ವೃತ್ತಿ ವಿಷಯ ಬಿಟ್ಟು ನನ್ನ ವೈಯಕ್ತಿಕ ವಿಷಯ ಕೆದಕುತ್ತಿರುವುದೇಕೆ?’ ಎಂದು ಮಲಿಕ್‌ರನ್ನು ವಾಂಖೇಡೆ ಪ್ರಶ್ನಿಸಿದ್ದಾರೆ.

ಡೀಲ್‌ ಮಾಡಿಲ್ಲ, ಶರಣಾಗುವೆ: ‘ಡೀಲ್‌ ಮಾಸ್ಟರ್‌’ ಗೋಸಾಯಿ

ಮುಂಬೈ: ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ ಮುಚ್ಚಿಹಾಕಲು 25 ಕೋಟಿ ರು. ಡೀಲ್‌ ಅನ್ನು ನಟ ಶಾರುಖ್‌ ಖಾನ್‌ ಜತೆ ಕುದುರಿಸಲು ಯತ್ನಿಸುತ್ತಿದ್ದ ಎನ್ನಲಾದ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಖಾಸಗಿ ಗೂಢಚಾರ ಕೆ.ಪಿ. ಗೋಸಾಯಿ ಮೌನ ಮುರಿದಿದ್ದು, ‘ಈ ಆರೋಪ ಸುಳ್ಳು’ ಎಂದಿದ್ದಾನೆ ಹಾಗೂ ‘ಶರಣಾಗುವೆ’ ಎಂದೂ ಹೇಳಿದ್ದಾನೆ.

ಆರ್ಯನ್‌ ಎನ್‌ಸಿಬಿ ವಶದಲ್ಲಿದ್ದಾಗ ಆತನ ಜತೆ ಸೆಲ್ಪಿ ತೆಗೆಸಿಕೊಂಡು ಗೋಸಾಯಿ ಸುದ್ದಿಯಾಗಿದ್ದ. ಆದರೆ ತಾನು ಖಾಸಗಿ ಗುಪ್ತಚರ ಹಾಗೂ ಡ್ರಗ್ಸ್‌ ಕೇಸಿನ ಮಾಹಿತಿದಾರ ಎಂದು ಹೇಳಿದ್ದ. ಕೆಲ ದಿನಗಳ ಹಿಂದೆ ಈತ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಟೀವಿ ಚಾನೆಲ್‌ ಒಂದರ ಜತೆ ಮಾತನಾಡಿದ ಗೋಸಾಯಿ, ‘ಅ.3ರಿಂದ ನನಗೆ ಎದರಿಕೆ ಕರೆಗಳು ಬರುತ್ತಿವೆ. ನಾನು ಡೀಲ್‌ ಕುದುರಿಸಲು ಶಾರುಖ್‌ ಮ್ಯಾನೇಜರ್‌ ಪೂಜಾ ದಡ್ಲಾನಿಯನ್ನು ಭೇಟಿ ಮಾಡಿಲ್ಲ. ನಾನು ಶರಣಾಗುವೆ’ ಎಂದಿದ್ದಾನೆ.