ನವದೆಹಲಿ(ನ.18): ರಾಜಧಾನಿ ದೆಹಲಿಯಲ್ಲಿ ಕೊರೋನಾ 3ನೇ ಅಲೆ ಭಾರೀ ಆತಂಕ ಹುಟ್ಟುಹಾಕಿರುವ ಬೆನ್ನಲ್ಲೇ, ಸೋಂಕು ಹಬ್ಬುವ ಹಾಟ್‌ಸ್ಪಾಟ್‌ಗಳಾಗಿರುವ ಪ್ರಮುಖ ಮಾರುಕಟ್ಟೆಗಳನ್ನು ಮುಚ್ಚುವ ಬಗ್ಗೆ ದೆಹಲಿಯ ಆಮ್‌ಆದ್ಮಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳನ್ನು ಲಾಕ್ಡೌನ್‌ ಮಾಡಲು ಅಗತ್ಯ ಅನುಮತಿ ನೀಡುವಂತೆ ದೆಹಲಿ ಸಿಎಂ ಕೇಜ್ರಿವಾಲ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಲ್ಲದೆ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ವಿವಾಹ ಕಾರ್ಯಕ್ರಮಗಳಲ್ಲಿ ಜನರು ಭಾಗಿಯಾಗಲು ನೀಡಿದ್ದ 200 ಜನರ ಮಿತಿಯನ್ನು 50ಕ್ಕೆ ಇಳಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ನವೆಂಬರ್‌ ತಿಂಗಳೊಂದರಲ್ಲೇ ದಿಲ್ಲಿಯಲ್ಲಿ 94000 ಜನರಿಗೆ ಸೋಂಕು ತಗುಲಿದ್ದು, 1200 ಜನರು ಸಾವನ್ನಪ್ಪಿದ್ದಾರೆ.

ಮೊದಲ ಕೊರೋನಾ ಕೇಸ್‌ ಪತ್ತೆಯಾಗಿ ಈಗ 1 ವರ್ಷ!

ಕೊರೋನಾ ಸಾವು ಹೆಚ್ಚಳ:

ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಕೊರೋನಾ ವೈರಸ್‌ ಪ್ರರಣಗಳು ಹೆಚ್ಚುತ್ತಿದ್ದು, ಸೋಂಕು ಧೃಢಪಡುವ ಪ್ರಮಾಣ ಶೇ.15.33ಕ್ಕೆ ಏರಿಕೆ ಆಗಿದೆ. ಇದು ದೇಶದಲ್ಲೇ ಅಧಿಕ. ಇದೇ ವೇಳೆ ಭಾನುವಾರ ಕೊರೋನಾದಿಂದ ಮತ್ತೆ 95 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 17 ದಿನಗಳ ಅಂತರದಲ್ಲಿ 1,258 ಮಂದಿ ಕೊರೋನಾಕ್ಕೆ ಬಲಿ ಆಗಿದ್ದಾರೆ.