Asianet Suvarna News Asianet Suvarna News

ಜೈಲಿಂದಲೇ ಕೇಜ್ರಿವಾಲ್‌ ಮೊದಲ ಆದೇಶ: ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ

ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾದರೂ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದ ಅರವಿಂದ ಕೇಜ್ರಿವಾಲ್‌, ಜಾರಿ ನಿರ್ದೇಶನಾಲಯದ (ಇ.ಡಿ.) ವಶದಲ್ಲಿರುವಾಗಲೇ ಕಾರ್ಯಾದೇಶವೊಂದನ್ನು ಹೊರಡಿಸಿದ್ದಾರೆ. 

Arvind Kejriwal issues his first order From ED lock up directive sent via note gvd
Author
First Published Mar 25, 2024, 9:02 AM IST

ನವದೆಹಲಿ (ಮಾ.25): ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾದರೂ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದ ಅರವಿಂದ ಕೇಜ್ರಿವಾಲ್‌, ಜಾರಿ ನಿರ್ದೇಶನಾಲಯದ (ಇ.ಡಿ.) ವಶದಲ್ಲಿರುವಾಗಲೇ ಕಾರ್ಯಾದೇಶವೊಂದನ್ನು ಹೊರಡಿಸಿದ್ದಾರೆ. ದೆಹಲಿ ನೀರು ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೈಲುಪಾಲಾದರೂ ರಾಜೀನಾಮೆ ನೀಡಲ್ಲ. ಜೈಲಿಂದಲೇ ಆಡಳಿತ ನಡೆಸುವೆ ಎಂದು ಕೇಜ್ರಿವಾಲ್‌ ಮೊನ್ನೆ ಹೇಳಿದ್ದರು. ಅದನ್ನು ಅವರು ಈಗ ಕಾರ್ಯರೂಪಕ್ಕೆ ತಂದಿದ್ದಾರೆ.

ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವೆ ಆತಿಷಿ, ‘ನಗರದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಕೊಳಚೆ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಹೆಚ್ಚುವರಿ ಟ್ಯಾಂಕರ್‌ಗಳನ್ನು ನಿಯೋಜಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಶನಿವಾರ ರಾತ್ರಿ ಕೇಜ್ರಿವಾಲ್‌ ಇ.ಡಿ. ವಶದಿಂದಲೇ ಲಿಖಿತ ಆದೇಶ ಹೊರಡಿಸಿ ತಮಗೆ ಹಸ್ತಾಂತರಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಅಲ್ಲದೆ ಅಗತ್ಯಬಿದ್ದರೆ ಈ ವಿಷಯದಲ್ಲಿ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರ ನೆರವನ್ನು ಪಡೆಯುವಂತೆಯೂ ಕೇಜ್ರಿವಾಲ್‌ ಸೂಚಿಸಿದ್ದಾರೆ. ವಿಶೇಷವೆಂದರೆ ಮದ್ಯ ಹಗರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸಿ ಕೇಜ್ರಿವಾಲ್‌ ಜೈಲಿಗೆ ಹೋಗಲು ಕಾರಣವಾಗಿದ್ದೇ ವಿ.ಕೆ.ಸಕ್ಸೇನಾ.

ಬರ ಪರಿಹಾರ ಬಗ್ಗೆ ಸುಪ್ರೀಂಕೋರ್ಟೇ ತೀರ್ಮಾನಿಸಲಿ: ಸಚಿವೆ ನಿರ್ಮಲಾ ಸೀತಾರಾಮನ್‌

ಕಣ್ಣೀರು ತರಿಸಿತು- ಆತಿಶಿ: ತಾವು ಸಂಕಷ್ಟದಲ್ಲಿದ್ದರೂ ಜನರ ಸಮಸ್ಯೆಗೆ ಸ್ಪಂದಿಸುವ ಕೇಜ್ರಿವಾಲ್‌ ಅವರ ಕಾಳಜಿ ನನ್ನ ಕಣ್ಣಲ್ಲಿ ನೀರು ತರಿಸುತ್ತಿದೆ ಎಂದು ತಮ್ಮ ನಾಯಕನನ್ನು ಆತಿಷಿ ಹೊಗಳಿದ್ದಾರೆ.

ಜೈಲಿಂದ ಕೇಜ್ರಿ ಹೆಸರಲ್ಲಿ ಹೊರಡಿಸಿದ್ದು ನಕಲಿ ಪತ್ರ: ಜೈಲಿನಿಂದಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೊರಡಿಸಿದ ಕಾರ್ಯಾದೇಶದ ಪತ್ರ ನಕಲಿ ಎಂದು ಬಿಜೆಪಿ ಆರೋಪಿಸಿದೆ. ಭಾನುವಾರ ಮಾತನಾಡಿದ ಬಿಜೆಪಿ ನಾಯಕರಾದ ಮಣಿಂದರ್‌ ಸಿಂಗ್‌ ಸಿರ್ಸಾ, ಸಂಸದ ಮನೋಜ್‌ ತಿವಾರಿ, ‘ಒಂದು ವೇಳೆ ಕೇಜ್ರಿವಾಲ್‌ ಆದೇಶ ಹೊರಡಿಸಬೇಕಾದರೆ ಅದನ್ನು ಮುಖ್ಯ ಕಾರ್ಯದರ್ಶಿಗಳ ಮೂಲಕ ಹೊರಡಿಸಬೇಕು. ಅದಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ಬೇಕು. ಇಲ್ಲಿ ಎರಡೂ ಆಗಿಲ್ಲ. 

ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಮೇಕೆದಾಟು ಡ್ಯಾಂ ನಿರ್ಮಾಣ: ಎಚ್‌.ಡಿ.ದೇವೇಗೌಡ

ಜೊತೆಗೆ ಕಾರ್ಯಾದೇಶದ ಪತ್ರದಲ್ಲಿ ಪತ್ರದ ಸಂಖ್ಯೆ ಅಥವಾ ಆರ್ಡ್‌ರ್‌ ನಂಬರ್‌ ಇಲ್ಲ. ಯಾರ ಹೆಸರಲ್ಲಿ ಹೊರಡಿಸಲಾಗಿದೆ, ಯಾರಿಗೆ ಆದೇಶ ನೀಡಲಾಗಿದೆ ಎಂಬ ಮಾಹಿತಿಯೂ ಇಲ್ಲ’ ಎಂದು ದೂರಿದ್ದಾರೆ. ಅಲ್ಲದೆ, ‘ಇಡೀ ಪ್ರಕರಣ ಒಂದು ಯೋಜಿತ ಸಂಚು. ದೆಹಲಿ ಸಿಎಂ ಕಚೇರಿಯನ್ನು ಕೆಲವರು ಹೈಜಾಕ್‌ ಮಾಡಿದ್ದಾರೆ. ಅನಧಿಕೃತ ವ್ಯಕ್ತಿಗಳು ಇಂಥ ಈ ಆದೇಶ ಹೊರಡಿಸಿದ್ದಾರೆ’ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

Follow Us:
Download App:
  • android
  • ios