ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲು ನಂ. 2 ರಲ್ಲಿ ಬಂಧಿಸಲಾಗಿದೆ. ಸೋಮವಾರ ರೂಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಿದ ನಂತರ ಅವರನ್ನು ಏಪ್ರಿಲ್ 15 ರವರೆಗೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲಾಗಿದೆ.  

ನವದೆಹಲಿ (ಏ.2): ಮನೀಷ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌, ಸಂಜಯ್‌ ಸಿಂಗ್‌ ಬಳಿಕ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಹಾಗೂ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಕೂಡ ತಿಹಾರ್‌ ಜೈಲು ಸೇರಿದ್ದಾರೆ. ಸೋಮವಾರ ದೆಹಲಿಯ ರೋಸ್‌ ಅವೆನ್ಯು ಕೋರ್ಟ್‌, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಬೆನ್ನಲ್ಲಿಯೇ ಅವರನ್ನು ಬಿಗಿ ಭದ್ರತೆಯಲ್ಲಿ ತಿಹಾರ್‌ ಜೈಲಿಗೆ ಕರೆತರಲಾಗಿತ್ತು. ದಿನದ 24 ಗಂಟೆಯೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಅವರನ್ನು ಇತಿಸಲಾಗಿದೆ. ದೇಶದ ಅತಿದೊಡ್ಡ ಜೈಲಾಗಿರುವ ತಿಹಾರ್‌ ಜೈಲಿನ ನಂ.2 ಸೆಲ್‌ ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಜೈಲು ಅಧಿಕಾರಿಗಳು ಇಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುತ್ತಾರೆ. ಈ ಕಾರಣಕ್ಕಾಗಿಯೇ ಹೈಪ್ರೊಫೈಲ್ ಜನರನ್ನು ಕರೆತಂದು ಈ ಜೈಲಿನಲ್ಲಿ ಇರಿಸಲಾಗುತ್ತದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿಗೆ ಹಾಕುವ ಮುನ್ನ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಅವರನ್ನು ಜೈಲು ಸಂಖ್ಯೆ 2 ರಿಂದ ಜೈಲು ಸಂಖ್ಯೆ 5 ಕ್ಕೆ ಸ್ಥಳಾಮತರ ಮಾಡಲಾಗಿದೆ. ಪ್ರಸ್ತುತ, ಮದ್ಯ ಹಗರಣದಲ್ಲಿ ಇದುವರೆಗೆ ಬಂಧಿತರಾಗಿರುವ ಎಲ್ಲಾ ಆರೋಪಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಈ ಪೈಕಿ ಮನೀಶ್ ಸಿಸೋಡಿಯಾ ಜೈಲು ಸಂಖ್ಯೆ 1 ರಲ್ಲಿ ಮತ್ತು ಸತ್ಯೇಂದ್ರ ಜೈನ್ ಜೈಲು ಸಂಖ್ಯೆ 7 ರಲ್ಲಿ ಇರಿಸಲಾಗಿದೆ. ಇದಲ್ಲದೇ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಜೈಲು ಸಂಖ್ಯೆ 6 ರಲ್ಲಿ ಮತ್ತು ವಿಜಯ್ ನಾಯರ್ ಜೈಲು ಸೇರಿದ್ದಾರೆ. ಆಮ್ ಆದ್ಮಿ ಪಕ್ಷದ ಸಂವಹನ ಉಸ್ತುವಾರಿಯನ್ನು ಜೈಲು ಸಂಖ್ಯೆ 4 ರಲ್ಲಿ ಇರಿಸಲಾಗಿದೆ. ಶ್ರದ್ಧಾ ವಾಕರ್‌ ಕೊಲೆ ಪ್ರಕರಣದ ಆರೋಪಿ ಅಫ್ತಾಬ್‌ ಪೂನಾವಾಲಾ ಕೂಡ 4ನೇ ನಂಬರ್‌ನ ಜೈಲಿನಲ್ಲಿದ್ದಾರೆ.

ತಿಹಾರ್‌ ಜೈಲಿಗೆ ಬಂದ ಬಳಿಕ ಅರವಿಂದ್‌ ಕೇಜ್ರಿವಾಲ್‌ ವಾರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಆ ಬಳಿಕ ಅವರನ್ನು ಬ್ಯಾರಕ್‌ಗೆ ಕರೆದುಕೊಂಡು ಹೋಗಲಾಗಿದ್ದು, ಇಲ್ಲಿಯೇ ಅವರು 14 ದಿನ ಇರಲಿದ್ದಾರೆ. 14 ಫೀಟ್‌ ಉದ್ದ ಹಾಗೂ 8 ಫೀಟ್‌ ಅಗಲದ ಬ್ಯಾರಕ್‌ ಇದಾಗಿದೆ. ಮಲಗಲು ಸಿಮೆಂಟ್‌ನ ಫ್ಲಾಟ್‌ಫಾರ್ಮ್‌ ಕೂಡ ಇದೆ. ಮಲಗಿಕೊಳ್ಳಲು ಹಾಸಿಗೆ ಹಾಗೂ ಬೆಡ್‌ಶೀಟ್‌ ನೀಡಲಾಗಿದೆ. ಇದೇ ಬ್ಯಾರಕ್‌ನಲ್ಲಿ ಟಿವಿ ಹಾಗೂ ಟಾಯ್ಲೆಟ್‌ ವ್ಯವಸ್ಥೆ ಕೂಡ ಇದೆ. ಎರಡು ಬಕೆಟ್‌ಗಳನ್ನೂ ನೀಡಲಾಗಿದೆ. ಸ್ನಾನಕ್ಕಾಗಿ ಒಂದು ಬಕೆಟ್‌ ನೀಡಲಾಗಿದ್ದರೆ, ನೀರು ಇರಿಸಿಕೊಳ್ಳಲು ಇನ್ನೊಂದು ಬಕೆಟ್‌ ನೀಡಲಾಗಿದೆ. ದಿನದ 24 ಗಂಟೆಯೂ ಬ್ಯಾರಕ್‌ನ ಹೊರಗಡೆ ಭದ್ರತಾ ಸಿಬ್ಬಂದಿಗಳು ಇರಲಿದ್ದಾರೆ. ತಿಹಾರ್ ಜೈಲಿನಲ್ಲಿರುವ ಜೈಲ್‌ ನಂ.2 ಅಪರಾಧಿಗಳಿಗೆ ಮಾತ್ರವೇ ಮೀಸಲಾಗಿದೆ. 

ಇನ್ನು ಜೈಲ್‌ ನಂ.2ನ ಇತಿಹಾಸ ಕೂಡ ವಿಶೇಷವಾಗಿದೆ. ಭೂಗತ ಪಾತಕಿ ಛೋಟಾ ರಾಜನ್‌ ಹಾಗೂ ಬಿಹಾರದ ಶಕ್ತಿಶಾಲಿ ರಾಜಕಾರಣಿ ಹಾಗೂ ಕ್ರಿಮಿನಲ್‌ ಮೊಹಮದ್‌ ಶಹಾಬುದ್ದೀನ್‌ನನ್ನು ಇದೇ ಜೈಲಿನಲ್ಲಿ ಇರಿಸಲಾಗಿತ್ತು. ಬಿಗಿ ಭದ್ರತೆ ಇರುವ ಕಾರಣ ಹೆಚ್ಚಿನ ಹೈಪ್ರೊಫೈಲ್‌ ಕೇಸ್‌ಗಳ ಆರೋಪಿಗಳನ್ನು ಇದೇ ಸೆಲ್‌ನಲ್ಲಿ ಇರಿಸಲಾಗುತ್ತಿತ್ತು. 2015ರಲ್ಲಿ ಇಂಡೋನೇಷ್ಯಾದಲ್ಲಿ ಛೋಟಾ ರಾಜನ್‌ನನ್ನು ಬಂಧಿಸಿದ ಬಳಿಕ ತಿಹಾರ್‌ ಜೈಲಿನ ಇದೇ ಸೆಲ್‌ನಲ್ಲಿ ಇರಿಸಲಾಗಿತ್ತು. 2018ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈತ ಕೊರೋನಾ ಸಮಯದಲ್ಲಿ ಸಾವು ಕಂಡಿದ್ದ.

2017ರಲ್ಲಿ ಕುಖ್ಯಾತ ಅಸಿಡ್‌ ದಾಳಿ ಪ್ರಕರಣದಲ್ಲಿ ಬಿಹಾರದ ಮಾಜಿ ಸಂಸದ ಮೊಹಮದ್‌ ಶಹಾಬುದ್ದೀನ್‌ನನ್ನೂ ಇದೇ ಸೆಲ್‌ನಲ್ಲಿ ಇರಿಸಲಾಗಿತ್ತು. ಜೀವಾವಧಿ ಶಿಕ್ಷೆ ಪಡೆದ ಈತನನ್ನು ಮೊದಲಿ ಸಿವಾನ್‌ ಜೈಲಿನಲ್ಲಿ ಇರಿಸಲಾಗಿತ್ತು. ಪತ್ರಕರ್ತ ರಾಜ್‌ದೇವ್‌ ರಂಜನ್‌ರನ್ನು ಕೊಲೆ ಮಾಡಿದ ಪ್ರಕರಣವೂ ವಿಚಾರಣೆ ನಡೆಯುತ್ತಿತ್ತು. ಈ ಹಂತದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ರಾಜ್‌ದೇವ್‌ ರಂಜನ್‌ ಪತ್ನಿ, ತಮ್ಮ ಜೀವಕ್ಕೆ ಅಪಾಯವಿದೆ ಎಂದು ಮನವಿ ಸಲ್ಲಿಸಿದ್ದರು. ಸಿವಾನ್‌ ಜೈಲಿನಲ್ಲಿಯೇ ಶಹಾಬುದ್ದೀನ್‌ ಇದ್ದಲ್ಲಿ, ಕೇಸ್‌ನ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಈತನನ್ನು ತಿಹಾರ್‌ ಜೈಲಿಗೆ ಕಳಿಸಲಾಗಿತ್ತು. ತಿಹಾರ್‌ ಜೈಲಿನಲ್ಲಿ ನಂ.2 ಸೆಲ್‌ನಲ್ಲಿ ಇರಿಸಲಾಗಿತ್ತು. ಇದರ ಕುರಿತು ಉಪವಾಸ ಪ್ರತಿಭಟನೆ ನಡೆಸಿದ್ದ ಶಹಾಬುದ್ದೀನ್‌ ಬಳಿಕ ಅನಾರೋಗ್ಯದಿಂದ ಸಾವು ಕಂಡಿದ್ದ.

ಅಬಕಾರಿ ಹಗರಣ: ವಿಚಾರಣೆಯಲ್ಲಿ ಇಬ್ಬರು ಸಚಿವ ಹೆಸರು ಬಾಯಿಬಿಟ್ಟ ಕೇಜ್ರಿ

ಇನ್ನು ತಿಹಾರ್‌ ಜೈಲ್‌ನ ನಂ.3 ಸೆಲ್‌ ಇನ್ನಷ್ಟು ಕುಖ್ಯಾತಿಯಾಗಿದೆ. ಸಂಸತ್‌ ದಾಳಿಯ ಮಾಸ್ಟರ್‌ ಮೈಂಡ್‌ ಅಫ್ಜಲ್‌ ಗುರುವಿನ ಆತ್ಮ ಇಲ್ಲಿಯೇ ಇದೆ ಎಂದು ಹಲವರು ನಂಬಿದ್ದಾರೆ. ಇದು ಸೆಲ್‌ನಲ್ಲಿದ್ದ ಹಲವು ವ್ಯಕ್ತಿಗಳ ಗಮನಕ್ಕೂ ಬಂದಿದ್ದು ಕೆಲವರ ಸಾವಿಗೂ ಕಾರಣವಾಗಿದೆ ಎನ್ನಲಾಗಿದೆ. 2013ರ ಫೆಬ್ರವರಿ 9 ರಂದು ಅಫ್ಜಲ್‌ ಗುರುನನ್ನು ಗಲ್ಲಿಗೇರಿಸಲಾಗಿತ್ತು. ಮರಣದಂಡನೆಗೂ ಒಂದು ದಿನ ಮುನ್ನ ಈತನಿಗೆ ಗಲ್ಲು ಶಿಕ್ಷೆ ಜಾರಿ ಮಾಡಲಾಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಆದರೆ, ಗಲ್ಲು ಶಿಕ್ಷೆ ಜಾರಿಯಾದ ಬಳಿಕ ಈತನ ಆತ್ಮ ಅಲ್ಲಿಯೇ ಇದೆ ಎನ್ನಲಾಗಿದೆ. ಇದು ಜೈಲ್‌ ನಂ.3 ಅಲ್ಲಿದ್ದ ಆರೋಪಿಗಳ ಗಮನಕ್ಕೂ ಬಂದಿದೆ ಎಂದು ಹೇಳಲಾಗುತ್ತಿದೆ.

ಇಡಿ ತನಿಖೆಗೆ ಅಸಹಕಾರ, ತನ್ನ ಪಕ್ಷದವರ ವಿರುದ್ಧವೇ ಕೇಜ್ರಿವಾಲ್ ಸುಳ್ಳು ಸಾಕ್ಷ್ಯ: ಕೇಜ್ರಿ ವಿರುದ್ಧ ಇಡಿ ಆರೋಪ