ಜಮ್ಮು(ಜ.07): ಗಡಿ ನಿಯಂತ್ರಣಾ ರೇಖೆಯ ಬಳಿ ಇರುವ ಲಾಂಚ್‌ ಪ್ಯಾಡ್‌ಗಳಲ್ಲಿ 400ಕ್ಕೂ ಹೆಚ್ಚು ಉಗ್ರರು ಬೀಡು ಬಿಟ್ಟಿದ್ದು, ಚಳಿಗಾಲದ ವೇಳೆ ಜಮ್ಮು- ಕಾಶ್ಮೀರದ ಒಳ ನುಸುಳಲು ಹೊಂಚು ಹಾಕಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಗಡಿಯಲ್ಲಿ ಭದ್ರತಾ ಪಡೆಗಳು ಉಗ್ರರ ಒಳನುಸುಳುವಿಕೆಯ ಮೇಲೆ ಕಟ್ಟೆಚ್ಚರ ವಹಿಸಿದ್ದರಿಂದ ಹತಾಶೆಗೊಂಡಿರುವ ಪಾಕಿಸ್ತಾನ ಭಾರೀ ಹಿಮಪಾತ ಆಗುವ ಸಂದರ್ಭದಲ್ಲಿ ಉಗ್ರರನ್ನು ಗಡಿಯ ಒಳಕ್ಕೆ ನುಸುಳಿಸಲು ಯತ್ನ ನಡೆಸುತ್ತಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯ ಗುಂಟ ಇರುವ ವಿವಿಧ ಲಾಂಚ್‌ಪ್ಯಾಡ್‌ಗಳಲ್ಲಿ 300ರಿಂದ 415 ಉಗ್ರರು ಅಡಗಿದ್ದಾರೆ. ಇವುಗಳ ಪೈಕಿ ಕಾಶ್ಮೀರ ಕಣಿವೆಯ ಉತ್ತರ ಪಿರ್‌ ಪಂಜಾಲ್‌ ಭಾಗದಲ್ಲಿ 175​ರಿಂದ 210 ಉಗ್ರರು ಅಡಗಿದ್ದಾರೆ. ಅದೇ ರೀತಿ ಜಮ್ಮು ಪ್ರಾಂತ್ಯದ ದಕ್ಷಿಣ ಪಿರ್‌ ಪಂಜಾಲ್‌ ಭಾಗದಲ್ಲಿ 119​-216 ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಗುಪ್ತಚರ ಮೂಲಗಳಿಂದ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಉಗ್ರ ಸಂಘಟನೆಗಳು ಸುರಂಗಗಳನ್ನು ಬಳಸಿಕೊಂಡು ಶಸ್ತ್ರ ಸಜ್ಜಿತ ಉಗ್ರರನ್ನು ಗಡಿಯ ಒಳಕ್ಕೆ ನುಸುಳಿಸಲು ಯತ್ನ ನಡೆಸುತ್ತಿರುವುದು, ಡ್ರೋನ್‌ಗಳ ಮೂಲಕ ಭಾರತದ ಒಳಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಯತ್ನಿಸಿದ್ದು ಈ ಮುನ್ನ ಬೆಳಕಿಗೆ ಬಂದಿತ್ತು. ಆದರೆ, ಈ ಬಾರಿ ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರಮಾಣದ ಹಿಮಪಾತ ಆಗುವ ವೇಳೆ ಉಗ್ರರನ್ನು ಒಳ ನುಸುಳಿಸುವ ಯತ್ನಕ್ಕೆ ಪಾಕಿಸ್ತಾನ ಮುಂದಾಗಿದೆ.