ನವದೆಹಲಿ(ಜ.26): ಟಿಆರ್‌ಪಿ (ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌) ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಿಷಯವೊಂದು ಬಯಲಾಗಿದೆ. ರಿಪಬ್ಲಿಕ್‌ ಟೀವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಂದ ಟಿಆರ್‌ಪಿ ತಿರುಚಲು ಕಳೆದ ಮೂರು ವರ್ಷದಲ್ಲಿ 48 ಲಕ್ಷ ರು. ಹಣ ಪಡೆದಿರುವುದಾಗಿ ಬಂಧಿತ ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಮುಂಬೈ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಪ್ರಕರಣ ಸಂಬಂಧ ಕೋರ್ಟ್‌ಗೆ ಪೊಲೀಸರು ಸಲ್ಲಿಸಿರುವ ಚಾಜ್‌ರ್‍ಶೀಟ್‌ನಲ್ಲಿ ಇದನ್ನು ತಿಳಿಸಲಾಗಿದೆ. ಈ ಪೈಕಿ 40 ಲಕ್ಷ ರು. ನಗದು ರೂಪದಲ್ಲಿ ಮತ್ತು 4 ವಿದೇಶ ಪ್ರವಾಸಕ್ಕಾಗಿ 12000 ಡಾಲರ್‌ಗಳನ್ನು ಪಡೆದಿದ್ದಾಗಿ ಪಾರ್ಥೋ ಹೇಳಿದ್ದಾರೆ.

ಜ.11ರಂದು ಮುಂಬೈ ಪೊಲೀಸರು ಸಲ್ಲಿಸಿರುವ 3,600 ಪುಟಗಳ ಚಾಜ್‌ರ್‍ಶೀಟ್‌ನಲ್ಲಿ ಬಾರ್ಕ್ ವಿಧಿವಿಜ್ಞಾನ ಆಡಿಟ್‌ ವರದಿ, ವಾಟ್ಸ್‌ಆ್ಯಪ್‌ ಚಾಟ್‌ ಮತ್ತು 59 ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ.

ಗೋಸ್ವಾಮಿಗೆ ರಹಸ್ಯ ಬಿಟ್ಟುಕೊಟ್ಟ ಮೋದಿ- ರಾಹುಲ್‌:

ಈ ನಡುವೆ ತಮಿಳುನಾಡಿನಲ್ಲಿ ಚುನಾವಣಾ ರಾರ‍ಯಲಿ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪುಲ್ವಾಮಾ ದಾಳಿ ವಿರುದ್ಧ ನಡೆದ ಬಾಲಾಕೋಟ್‌ ಏರ್‌ಸ್ಟೆ್ರೖಕ್‌ ಬಗ್ಗೆ ಸ್ವತಃ ಪ್ರಧಾನಿ ಮೋದಿಯೇ ರಿಪಬ್ಲಿಕ್‌ ಟೀವಿ ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ತಿಳಿಸಿದ್ದರು ಎಂದು ಆರೋಪಿಸಿದ್ದಾರೆ.

ಏರ್‌ಸ್ಟೆ್ರೖಕ್‌ ಬಗ್ಗೆ ಕೇವಲ 5 ಮಂದಿ ಹೊರತಾಗಿ ಯಾರಿಗೂ ತಿಳಿದಿರಲಿಲ್ಲ. ಆದರೆ ರಿಪಬ್ಲಿಕ್‌ ಟೀವಿ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರಿಗೂ ಮೊದಲೇ ಈ ವಿಷಯ ತಿಳಿದಿತ್ತು ಎಂದು ಇತ್ತೀಚೆಗೆ ಬಯಲಾಗಿದೆ. ಅದರರ್ಥ ಆ ಐವರ ಪೈಕಿ ಒಬ್ಬರು ಅರ್ನಬ್‌ಗೆ ವಿಷಯ ತಿಳಿಸಿ ವಾಯುಸೇನೆಗೆ ವಿಶ್ವಾಸದ್ರೋಹ ಮಾಡಿದ್ದಾರೆ. ಒಂದು ವೇಳೆ ಪ್ರಧಾನಿ ವಿಷಯ ಬಹಿರಂಗಪಡಿಸಿಲ್ಲ ಎಂದಾದರೆ ಪತ್ರಕರ್ತನ ವಿರುದ್ಧ ಏಕೆ ತನಿಖೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.