ದೇಶದ ಸೇನಾ ಪಡೆಗೆ ಶತ್ರು ‘ಕಣ್ತಪ್ಪಿಸುವಂಥ’ ನೂತನ ಸಮವಸ್ತ್ರ: 14 ವರ್ಷಗಳ ಬಳಿಕ ಬದಲಾವಣೆ!

* ಸೇನಾ ದಿನದಂದು ವಿಶಿಷ್ಟಯೂನಿಫಾರಂ ಬಿಡುಗಡೆ

* ದೇಶದ ಸೇನಾ ಪಡೆಗೆ ಬಂತು ಶತ್ರು ‘ಕಣ್ತಪ್ಪಿಸುವಂಥ’ ನೂತನ ಸಮವಸ್ತ್ರ

* ಯೋಧರ ಸಲಹೆ ಪಡೆದು ಆಯ್ಕೆ

Army displays new combat uniform for first time pod

ನವದೆಹಲಿ(ಜ16): ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಮತ್ತು ಅಧಿಕಾರಿಗಳಿಗೆ ಹದಿನಾಲ್ಕು ವರ್ಷಗಳ ನಂತರ ಹೊಸ ವಿನ್ಯಾಸದ ಸಮವಸ್ತ್ರ ದೊರೆತಿದೆ. ಅದನ್ನು ಸೇನಾ ದಿನವಾದ ಶನಿವಾರ ಬಿಡುಗಡೆ ಮಾಡಲಾಗಿದ್ದು, ಹಂತಹಂತವಾಗಿ ಸೇನಾಪಡೆಯಲ್ಲಿ ಸೇವೆ ಸಲ್ಲಿಸುವ ಎಲ್ಲರಿಗೂ ನೀಡಲಾಗುತ್ತದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.

ಬದಲಾದ ಕಾಲಘಟ್ಟದ ಅಗತ್ಯ ಹಾಗೂ ವೈರಿಗಳ ಕಣ್ಣುತಪ್ಪಿಸಲು ಹೆಚ್ಚು ನೆರವಿಗೆ ಬರುವ ರೀತಿಯಲ್ಲಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಫ್ಯಾಷನ್‌ ಟೆಕ್ನಾಲಜಿ ಸಂಸ್ಥೆ (ಎನ್‌ಐಎಫ್‌ಟಿ) ಇದನ್ನು ವಿನ್ಯಾಸಗೊಳಿಸಿದೆ. ಎನ್‌ಐಎಫ್‌ಟಿ ವಿನ್ಯಾಸಗೊಳಿಸಿದ್ದ 15 ಕ್ಯಾಮಫ್ಲಾಜ್‌ ಮಾದರಿ, 4 ವಿನ್ಯಾಸ, 8 ರೀತಿಯ ಬಟ್ಟೆಯಲ್ಲಿ ಅಂತಿಮವಾಗಿ ಒಂದನ್ನು ಸೇನಾಪಡೆ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಸಿಗದು:

ಕಡೆಯದಾಗಿ 2008ರಲ್ಲಿ ಸೇನಾಪಡೆಯ ಯೋಧರ ಸಮವಸ್ತ್ರದ ವಿನ್ಯಾಸ ಬದಲಿಸಲಾಗಿತ್ತು. ಆ ಸಮವಸ್ತ್ರಗಳು ಮುಕ್ತ ಮಾರುಕಟ್ಟೆಯಲ್ಲೂ ಸಿಗುತ್ತವೆ. ಹೀಗಾಗಿ ಸೇನಾ ಸಮವಸ್ತ್ರಕ್ಕಿರುವ ಮೌಲ್ಯ ಕಡಿಮೆಯಾಗಿದೆ. ಆದ್ದರಿಂದ ಆಧುನಿಕ ಬಟ್ಟೆಹಾಗೂ ವಿನ್ಯಾಸವನ್ನು ಬಳಸಿ ಸೇನಾಪಡೆಯ ಪುರುಷ ಸಿಬ್ಬಂದಿ ಮತ್ತು ಮಹಿಳಾ ಸಿಬ್ಬಂದಿಗೆ ಹೊಸ ಸಮವಸ್ತ್ರ ರೂಪಿಸಲಾಗಿದೆ. ಇದು ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಸೇನಾಪಡೆಗಳ ಯೋಧರು ಮತ್ತು ಅಧಿಕಾರಿಗಳಿಗೆ ಮಾತ್ರ ದೊರೆಯಲಿದೆ ಎಂದು ತಿಳಿದುಬಂದಿದೆ.

ಸದ್ಯ 300 ಜೊತೆ ಸಮವಸ್ತ್ರಗಳನ್ನು ಮಾತ್ರ ತಯಾರಿಸಲಾಗಿದೆ. ಸದ್ಯದಲ್ಲೇ ಹೊಸ ವಿನ್ಯಾಸದ ಸಮವಸ್ತ್ರವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ ಟೆಂಡರ್‌ ಆಹ್ವಾನಿಸಲಾಗುತ್ತದೆ. ನಂತರ ಸೇನಾಪಡೆಯ ಎಲ್ಲರಿಗೂ ಹೊಸ ಸಮವಸ್ತ್ರ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲ ವರ್ಷಗಳೇ ಬೇಕಾಗುತ್ತವೆ ಎಂದು ಮೂಲಗಳು ಹೇಳಿವೆ.

ಯೋಧರ ಅಭಿಪ್ರಾಯ ಪಡೆದು ಫೈನಲ್‌:

ಹೊಸ ಸಮವಸ್ತ್ರವನ್ನು ಅಂತಿಮಗೊಳಿಸುವುದಕ್ಕೂ ಮುನ್ನ ಸೇನಾಪಡೆಯು ಅಂತಿಮಗೊಳಿಸಿದ್ದ 4 ಕ್ಯಾಮಫ್ಲಾಜ್‌ ಮಾದರಿಯ, ಮೂರು ವಿನ್ಯಾಸದ, ಐದು ರೀತಿಯ ಬಟ್ಟೆಗಳನ್ನು ಬೇರೆ ಬೇರೆ ಇನ್‌ಫ್ಯಾಂಟ್ರಿ ಬ್ರಿಗೇಡ್‌ಗಳು, ಒಂದು ಆರ್ಟಿಲರಿ ಬ್ರಿಗೇಡ್‌ ಹಾಗೂ ದೆಹಲಿಯ ಮಿಲಿಟರಿ ಪೊಲೀಸ್‌ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ 150 ಸಿಬ್ಬಂದಿಗೆ 15 ಸೆಟ್‌ ನೀಡಲಾಗಿತ್ತು. ಅವರಿಂದ ಅಭಿಪ್ರಾಯ ಸಂಗ್ರಹಿಸಿ, ನಂತರ ಸೇನಾ ಕಮಾಂಡರ್‌ಗಳ ಪ್ರತಿಕ್ರಿಯೆ ಪಡೆದು, ಅಂತಿಮವಾಗಿ ಸೇನಾಪಡೆ ಮುಖ್ಯಸ್ಥ ಜ.ಎಂ.ಎಂ.ನರವಣೆ ಅವರು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷತೆ ಏನು?

- 70% ಹತ್ತಿ, 30% ಪಾಲಿಸ್ಟರ್‌ ಬಳಸಿ ತಯಾರಿಸಲಾಗಿದೆ

- ಕಠಿಣ ಹವಾಮಾನದಲ್ಲೂ ಸೇನೆಯ ಯೋಧರಿಗೆ ಹಿತಕಾರಿ

- ಅತ್ಯಂತ ಹಗುರವಾಗಿದೆ. ಬಹುಬೇಗನೆ ಒಣಗಿ ಬಿಡುತ್ತದೆ

- ಚಳಿಗಾಲ, ಬೇಸಿಗೆಯಲ್ಲೂ ಯೋಧರಿಗೆ ಆರಾಮದಾಯಕ

- ಮುಕ್ತ ಮಾರುಕಟ್ಟೆಯಲ್ಲಿ ಸಿಗದು. ಯೋಧರಿಗಷ್ಟೇ ಲಭ್ಯ

- 13 ಅಳತೆಗಳಲ್ಲಿದೆ. ಪ್ಯಾಂಟ್‌ ಅನ್ನು ಬೂಟೊಳಗೆ ಸಿಕ್ಕಿಸಬಹುದು

Latest Videos
Follow Us:
Download App:
  • android
  • ios