ನವದೆಹಲಿ(ನ.09): ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ಭಾನುವಾರ ತಡೆಯಲು ಸೇನೆ ಹಾಗೂ ಬಿಎಸ್‌ಎಫ್‌ ನಡೆಸಿದ ಕಾರ್ಯಾಚರಣೆ ವೇಳೆ ಸೇನಾಧಿಕಾರಿ ಸೇರಿದಂತೆ ನಾಲ್ವರು ಯೋಧರು ಬಲಿಯಾಗಿದ್ದಾರೆ. ಇದೇ ವೇಳೆ, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಛಿಲ್‌ ವಲಯದಲ್ಲಿ ತಡರಾತ್ರಿ 1 ಗಂಟೆ ವೇಳೆ ಗಡಿ ರೇಖೆಯ ಆಚೆ ಇದ್ದ ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸಿದ್ದರು. ಇದನ್ನು ಗಡಿ ಕಾಯುತ್ತಿದ್ದ ಬಿಎಸ್‌ಎಫ್‌ ಯೋಧರು ಗಮನಿಸಿ ಮೊದಲು ದಾಳಿ ನಡೆಸಿದರು. ಕೂಡಲೇ ಹೆಚ್ಚುವರಿಯಾಗಿ ಸೇನಾಪಡೆಗಳನ್ನು ಕರೆಸಿಕೊಂಡು 3 ತಾಸು ದಾಳಿ ಮುಂದುವರಿಸಲಾಯಿತು. ಈ ವೇಳೆ ಓರ್ವ ಉಗ್ರನನ್ನು ಕೊಲ್ಲಲಾಯಿತು. ಕಾರ್ಯಾಚರಣೆ ವೇಳೆ ಓರ್ವ ಬಿಎಸ್‌ಎಫ್‌ ಯೋಧ ಹುತಾತ್ಮರಾದರು. ಕಾರ್ಯಾಚರಣೆ ಬೆಳಗ್ಗೆ 4ರ ವೇಳೆಗೆ ಅಂತ್ಯವಾಯಿತು.

ಆದರೆ ಬೆಳಗ್ಗೆ 10.20ರ ಸುಮಾರಿಗೆ ಉಗ್ರರು ಅಲ್ಲೇ ಇರುವ ಸಂಗತಿ ಗೊತ್ತಾಗಿ ಕಾರ್ಯಾಚರಣೆ ಆರಂಭಿಸಲಾಯಿತು. ಈ ವೇಳೆ ಮತ್ತಿಬ್ಬರು ಉಗ್ರರನ್ನು ಕೊಲ್ಲಲಾಯಿತು. ಈ ಕಾರ್ಯಾಚರಣೆ ವೇಳೆ ಸೇನಾಧಿಕಾರಿ ಸೇರಿ ಮೂವರು ಯೋಧರು ಹುತಾತ್ಮರಾದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ದೇಶ ಸೇವೆಯ ಗುರಿ ಇಟ್ಟುಕೊಂಡು ಸೇನೆ ಸೇರಿದ್ದ ಅಶುತೋಷ್‌ಗೆ ಸಣ್ಣ ಪ್ರಾಯದಲ್ಲೇ ಉತ್ತಮ ಸ್ಥಾನಮಾನ ಲಭಿಸಿದೆ. ಧೈರ್ಯಕ್ಕೆ ಹೆಸರುವಾಸಿಯಾಗಿರುವ ಅಶುತೋಷ್,‌ ಅತ್ಯಂತ ವಿನಯವಂತ ಎಂದು ಅವರ ಗೆಳೆಯರು ತಿಳಿಸಿದ್ದಾರೆ. ಇನ್ನು ಬಿಎಸ್‌ಎಫ್‌ನ ಹವಾಲ್ದಾರ್‌ ಪ್ರವೀಣ್‌ ಕುಮಾರ್‌, ರೈಫಲ್‌ಮ್ಯಾನ್‌ ಮಹೇಶ್ವರ್‌ ಹುತಾತ್ಮರಾಗಿದ್ದಾರೆ. ಇವರೆಲ್ಲಾ ಮದ್ರಾಸ್‌ ರೆಜಿಮೆಂಟ್‌ನಲ್ಲಿ ಕಾರ್ಯನಿವರ್ಹಿಸುತ್ತಿದ್ದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.