ಪ್ರವಾದಿ ಅವಹೇಳನ: ನೂಪುರ್‌ ಶರ್ಮಾಗೆ ಉಗ್ರರಿಂದ ಬೆದರಿಕೆ!

* ಪ್ರವಾದಿ ಮೊಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ

* ಪ್ರವಾದಿ ಅವಹೇಳನ: ನೂಪುರ್‌ ಶರ್ಮಾಗೆ ಉಗ್ರರಿಂದ ಬೆದರಿಕೆ

* ಹೇಳಿಕೆಯನ್ನು ಹಿಂಪಡೆದು, ಬೇಷರತ್‌ ಕ್ಷಮೆ ಕೇಳಬೇಕು

* ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ: ಘಜ್ವಾತುಲ್‌ ಹಿಂದ್‌

* ರಾಮಸೇನೆ ಹೇಳಿಕೆಗಳ ಬಗ್ಗೆಯೂ ಸಂಘಟನೆ ಉಲ್ಲೇಖ

Apologise or else Nupur Sharma granted security cover amid threat from terror group pod

ನವದೆಹಲಿ/ಮುಂಬೈ(ಜೂ. 08): ಪ್ರವಾದಿ ಮೊಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯಿಂದ ಅಮಾನತಾಗಿರುವ ನಾಯಕಿ ನೂಪುರ್‌ ಶರ್ಮಾ ಅವರಿಗೆ ಉಗ್ರ ಸಂಘಟನೆಯೊಂದು ಜೀವ ಬೆದರಿಕೆಯೊಡ್ಡಿದೆ.

‘ನೂಪುರ್‌ ಶರ್ಮಾ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಇಡೀ ಜಗತ್ತಿನ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ಪ್ರವಾದಿಗಳನ್ನು ಅವಹೇಳನ ಮಾಡಿದವರಿಗೆ ಏನು ಮಾಡಲಾಗುತ್ತದೆಯೋ ಅದನ್ನೇ ನೂಪುರ್‌ ಅವರಿಗೆ ಮಾಡಲಾಗುತ್ತದೆ’ ಎಂದು ಮುಜಾಹಿದೀನ್‌ ಘಜ್ವಾತುಲ್‌ ಹಿಂದ್‌ ಎಂಬ ಉಗ್ರ ಸಂಘಟನೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದು ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಬಿತ್ತರವಾಗಿದೆ.

ಇದೇ ವೇಳೆ, ಬಿಜೆಪಿ ನಾಯಕರು ನಿಂತರವಾಗಿ ಮುಸ್ಲಿಂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌, ರಾಮಸೇನೆ, ಬಜರಂಗದಳ, ಶಿವಸೇನೆಗಳು ಇಸ್ಲಾಂ ಹಾಗೂ ಮುಸ್ಲಿಮರ ವಿರುದ್ಧ ನಿರಂತರವಾಗಿ ದ್ವೇಷದ ಭಾಷಣ ಮಾಡುತ್ತಿವೆ ಎಂದು ಕಿಡಿಕಾರಿದೆ.

ಈ ಸಂಘಟನೆ ಕಾಶ್ಮೀರದಲ್ಲಿ ಸಕ್ರಿಯವಾಗಿದೆ. ಕಳೆದ ಜನವರಿಯಲ್ಲಿ ದೆಹಲಿಯ ಗಾಜಿಪುರ್‌ ಹೂವಿನ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಇದರ ಪಾತ್ರ ಇದೆ ಎಂದು ಹೇಳಲಾಗಿತ್ತು.

ನೂಪುರ್‌ಗೆ ಸಮನ್ಸ್‌:

ಪ್ರವಾದಿ ಮೊಹಮ್ಮದರ ಕುರಿತು ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಮಾನತಾಗಿರುವ ನಾಯಕಿ ನೂಪುರ್‌ ಶರ್ಮಾ ಅವರಿಗೆ ಮಹಾರಾಷ್ಟ್ರ ಪೊಲೀಸರು ಸಮನ್ಸ್‌ ನೀಡಿದ್ದಾರೆ. ಜೂ.22ರಂದು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ. ಪ್ರವಾದಿ ಬಗ್ಗೆ ನೂಪುರ್‌ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಥಾಣೆ ಜಿಲ್ಲೆಯ ಮುಂಬ್ರಾ ಠಾಣೆಯಲ್ಲಿ ದೂರೊಂದು ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ಸಮನ್ಸ್‌ ಜಾರಿಗೊಳಿಸಲಾಗಿದೆ.

ಮನೆಗೆ ಭದ್ರತೆ:

ತಮಗೆ ಜೀವ ಬೆದರಿಕೆ ಕರೆ ಬರುತ್ತಿದೆ ಎಂದು ನೂಪುರ್‌ ಶರ್ಮಾ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ದೆಹಲಿಯ ಅವರ ಮನೆ ಮತ್ತು ಕುಟುಂಬ ಸದಸ್ಯರಿಗೆ ದೆಹಲಿ ಪೊಲೀಸರು ಭದ್ರತೆ ವಹಿಸಿದ್ದಾರೆ.

ಪ್ರವಾದಿ ನಿಂದನೆ: ಮತ್ತಷ್ಟು ದೇಶಗಳಿಂದ ಖಂಡನೆ

 

ಟೀವಿ ಚರ್ಚೆ ವೇಳೆ ಪ್ರವಾದಿ ಮೊಹಮ್ಮದ್‌ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಹೇಳಿದ್ದಾರೆ ಎನ್ನಲಾದ ಅವಹೇಳನಕಾರಿ ಮಾತುಗಳನ್ನು ಇರಾಕ್‌, ಲಿಬಿಯಾ, ಮಲೇಷ್ಯಾ, ಟರ್ಕಿ ದೇಶಗಳು ಟೀಕಿಸಿವೆ. ಮತ್ತೊಂದೆಡೆ ವಿಶ್ವಸಂಸ್ಥೆ ಕೂಡಾ ನಾವು ಧರ್ಮ ಸಹಿಷ್ಣುತೆಯನ್ನು ಬಲವಾಗಿ ಬೆಂಬಲಿಸುತ್ತೇವೆ ಎನ್ನುವ ಮೂಲಕ ಪ್ರವಾದಿ ಮೊಹಮ್ಮದ್‌ ಕುರಿತ ಹೇಳಿಕೆ ಖಂಡಿಸಿದೆ.

‘ಪ್ರವಾದಿ ನಿಂದನೆಯ ಹೇಳಿಕೆ ದುರುದ್ದೇಶಪೂರ್ವಕ ಮತ್ತು ಅಪಮಾನಕರವಾಗಿದೆ. ಇಂತಹವುಗಳನ್ನು ನಿಗ್ರಹಿಸದಿದ್ದರೆ ಪರಿಣಾಮ ಗಂಭೀರವಾಗಿರಲಿದೆ ಎಂದು ಇರಾಕ್‌ ಹೇಳಿದೆ. ಇನ್ನು, ಇಂಥ ಹೇಳಿಕೆ ಅಪಮಾನಕರ ಎಂದು ಲಿಬಿಯಾ ಪ್ರತಿಕ್ರಿಯಿಸಿದೆ. ಮಲೇಷ್ಯಾದ ದೇಶಾಂಗ ಸಚಿವಾಲಯ ಸಹ ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, ಭಾರತೀಯ ರಾಯಭಾರಿಗೆ ನೋಟಿಸ್‌ ಜಾರಿ ಮಾಡಿದೆ. ಜೊತೆಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ನಾಯಕರನ್ನು ಅಮಾನತು ಮಾಡಿರುವ ಕ್ರಮವನ್ನು ಸ್ವಾಗತಿಸಿದೆ.

ಈ ನಡುವೆ ವಿದೇಶಗಳ ಟೀಕೆಗೆ ಪ್ರತಿಕ್ರಿಯಿಸಿರುವ ಭಾರತ, ನಮ್ಮ ಸರ್ಕಾರವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ನಿಂದನೆಗೆ ಸಂಬಂಧಿಸಿದಂತೆ ಈಗಾಗಲೇ ಕಠಿಣ ನಿರ್ಧಾರ ಕೈಗೊಂಡಾಗಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯೂ ಆಕ್ಷೇಪ: ಪ್ರವಾದಿ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಎಲ್ಲಾ ಧರ್ಮಗಳನ್ನು ಗೌರವಿಸುವುದು ಮತ್ತು ಧರ್ಮ ಸಹಿಷ್ಣುತೆಯನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್‌ ದುಜಾರಿಕ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios