ನವದೆಹಲಿ (ಜ. 08): 2005ರಲ್ಲಿ ತನ್ನನ್ನು ಪೋರ್ಚುಗಲ್‌ನಿಂದ ಭಾರತಕ್ಕೆ ಗಡೀಪಾರು ಮಾಡಿದ್ದು ಅಕ್ರಮ ಹಾಗೂ ನ್ಯಾಯಬದ್ಧವಲ್ಲ. ಭಾರತೀಯ ಅಧಿಕಾರಿಗಳು ಗಡೀಪಾರು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಗುರುವಾರ ನಿರಾಕರಿಸಿದೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಲು ಹಾಗೂ ವಕೀಲರ ಜೊತೆ ಮಾತನಾಡಲು ತನ್ನನ್ನು ಮಹಾರಾಷ್ಟ್ರದ ತಾಲೋಜಾ ಜೈಲಿನಿಂದ ದೆಹಲಿಯ ತಿಹಾರ್‌ ಜೈಲಿಗೆ ಸ್ಥಳಾಂತರಿಸಬೇಕು ಎಂದು ಅಬು ಸಲೇಂ ಕೋರಿಕೆ ಸಲ್ಲಿಸಿದ್ದಾನೆ. ಆದರೆ, ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರಿದ್ದ ಪೀಠ, ಅಬು ಸಲೇಂಗೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಹಾಕುವಂತೆ ಸೂಚನೆ ನೀಡಿದೆ.