ಕೋಲ್ಕತಾ[ನ.30]: ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಚುನಾವಣೆ ಗೆದ್ದಾಗಲೆಲ್ಲಾ ಅಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ಗಳನ್ನು ತಿರುಚಲಾಗಿದೆ ಎಂದು ವಿಪಕ್ಷಗಳು ದೂರುವುದು, ಮತ್ತೊಂದೆಡೆ ಯಾವುದೇ ಕಾರಣಕ್ಕೂ ಇವಿಎಂ ತಿರುಚುವುದು ಸಾಧ್ಯವಿಲ್ಲ ಎಂದು ಬಿಜೆಪಿ ತಿರುಗೇಟು ನೀಡುವುದು ಸಂಪ್ರದಾಯವೆಂಬಂತೆ ನಡೆದುಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಕೂಡಾ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿತ್ತು. ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಗೆದ್ದ ಬೆನ್ನಲ್ಲೇ, ಇವಿಎಂಗಳ ಬಗ್ಗೆ ಬಿಜೆಪಿ ನಾಯಕರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಸ್ಥಳೀಯ ಬಿಜೆಪಿ ನಾಯಕ ರಾಹುಲ್‌ ಸಿನ್ಹಾ, ‘ಚುನಾವಣಾ ಆಯೋಗವೇ ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದರೂ, ಈ ಉಪ ಚುನಾವಣೆ ನಡೆಸಿದ್ದು ರಾಜ್ಯ ಸರ್ಕಾರ. ಜೊತೆಗೆ ರಾಜ್ಯದ ಆಡಳಿತ ಯಂತ್ರ ಕೂಡಾ ಬಹಿರಂಗವಾಗಿಯೇ ತೃಣಮೂಲ ಕಾಂಗ್ರೆಸ್‌ಗೆ ಸಹಾಯ ಮಾಡಿತ್ತು. ಚುನಾವಣೆ ಗೆಲ್ಲಲು ಟಿಎಂಸಿ ಏನು ಬೇಕಾದರೂ ಮಾಡಲು ಸಿದ್ಧವಿದೆ. ಇವಿಎಂನಲ್ಲಿ ಏನು ಬೇಕಾದರೂ ಆಗಬಹುದು. ಮತ ಎಣಿಕೆ ವೇಳೆ ಟಿಎಂಸಿ ಇವಿಎಂಗಳಲ್ಲಿ ಅಕ್ರಮ ಎಸಗಿರುವ ಸಾಧ್ಯತೆ ಇದೆ’ ಎಂದು ಆರೋಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಸಕ್ತ ವಿಧಾನಸಭಾ ಚುನಾವಣೆ ನಡೆದ ಕಲಿಯಾಗಂಜ್‌, ಕರೀಂಪುರ ವ್ಯಾಪ್ತಿಯಲ್ಲಿ ಬಿಜೆಪಿಗೆ 2016ರಲ್ಲಿ ಬಂದಿದ್ದಕ್ಕಿಂತ ಹೆಚ್ಚಿನ ಮತ ಬಂದಿತ್ತು. ಜೊತೆಗೆ ಖರಗ್‌ಪುರ ಸದರ್‌ ಕ್ಷೇತ್ರದಲ್ಲಿ ಟಿಎಂಸಿ ಇದೇ ಮೊದಲ ಬಾರಿಗೆ ಜಯ ಗಳಿಸಿದೆ. ಇದನ್ನೆಲ್ಲಾ ನೋಡಿದರೆ ಇಲ್ಲಿ ಏನೋ ಗೋಲ್‌ಮಾಲ್‌ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.