ದಿಲ್ಲಿ, ಅಲಿಗಢದಲ್ಲಿ ಮತ್ತೆ ಸಿಎಎ ಹಿಂಸಾಚಾರ| ಕಲ್ಲುತೂರಾಟ, ಲಾಠಿಪ್ರಹಾರ, ಅಶ್ರುವಾಯು ಪ್ರಯೋಗ| ದಿಲ್ಲಿಯಲ್ಲಿ ಪರ- ವಿರೋಧಿ ಪ್ರತಿಭಟನಾಕಾರರ ಕಲ್ಲು ತೂರಾಟ| ಅಲಿಗಢದಲ್ಲಿ ಪೊಲೀಸರ ಮೇಲೆ ಕಲ್ಲೆಸೆತ| ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ

ನವದೆಹಲಿ/ಅಲಿಗಢ[ಫೆ.24]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳು ಭಾನುವಾರ ಏಕಾಏಕಿ ಹಿಂಸೆಗೆ ತಿರುಗಿವೆ. ರಾಜಧಾನಿ ದೆಹಲಿಯಲ್ಲಿ ಸಿಎಎ ಪರ- ವಿರೋಧಿ ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿದ್ದರೆ, ಉತ್ತರಪ್ರದೇಶದ ಅಲಿಗಢದಲ್ಲಿ ಪೊಲೀಸರು ಹಾಗೂ ಸಿಎಎ ವಿರೋಧಿ ಪ್ರತಿಭಟನಾಕಾರರ ನಡುವೆ ತಿಕ್ಕಾಟ ನಡೆದಿದೆ. ಎರಡೂ ಕಲ್ಲು ತೂರಾಟ ನಡೆದಿದ್ದು, ಲಾಠಿ ಪ್ರಹಾರ ಹಾಗೂ ಅಶ್ರುವಾಯು ಸಿಡಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ 500ಕ್ಕೂ ಹೆಚ್ಚು ಮಹಿಳೆಯರು ಶನಿವಾರದಿಂದ ದೆಹಲಿಯ ಜಫ್ರಾಬಾದ್‌ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ಇದರ ಹತ್ತಿರದಲ್ಲೇ ಇರುವ ಮೌಜ್ಪುರ-ಬಾಬರ್‌ಪುರ ಮೆಟ್ರೋ ನಿಲ್ದಾಣಗಳ ಬಳಿ ಭಾನುವಾರ ಸಂಜೆ ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ ನೇತೃತ್ವದ ಸಿಎಎ ಪರ ಹಾಗೂ ಸಿಎಎ ವಿರೋಧಿ ಬಣಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಮೌಜ್ಪುರ್‌ ಎಂಬಲ್ಲಿ ಉಭಯ ಬಣಗಳು ಒಬ್ಬರ ಮೇಲೊಬ್ಬರು ಕಲ್ಲು ತೂರಾಟ ನಡೆಸಿವೆ. ಈ ವೇಳೆ ಪೊಲೀಸರು ಶಾಂತಿ ಪುನಃಸ್ಥಾಪನೆ ಹಾಗೂ ಉದ್ರಿಕ್ತರ ಚದುರುವಿಕೆಗಾಗಿ ಆಶ್ರವಾಯುಗಳನ್ನು ಸಿಡಿಸಿದ್ದಾರೆ. ಅನಾಹುತ ತಡೆಯಲು ದಿಲ್ಲಿಯ ಮೌಜ್ಪುರ-ಬಾಬರ್‌ಪುರ ಹಾಗೂ ಜಫ್ರಾಬಾದ್‌ ಮೆಟ್ರೋ ನಿಲ್ದಾಣಗಳ ಗೇಟ್‌ಗಳನ್ನು ಬಂದ್‌ ಮಾಡಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ, ‘ಸಿಎಎ ವಿರುದ್ಧದ ಪ್ರತಿಭಟನೆಗಳ ಹೆಸರಿನಲ್ಲಿ ನಗರದಲ್ಲಿನ ರಸ್ತೆಗಳನ್ನು ಬಂದ್‌ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ರಸ್ತೆಗಳಲ್ಲಿರುವ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರಿಗೆ 3 ದಿನಗಳ ಕಾಲಾವಕಾಶ ನೀಡುತ್ತೇವೆ. ಆ ನಂತರವೂ ಇದೇ ರೀತಿಯ ಘಟನೆಗಳು ಮುಂದುವರಿದಿದ್ದೇ ಆದಲ್ಲಿ, ಟ್ರಂಪ್‌ ಅವರು ಭಾರತದಲ್ಲಿರುವವರೆಗೂ ಮಾತ್ರ ನಾವು ಶಾಂತಿಯಿಂದಿರುತ್ತೇವೆ. ಆ ನಂತರ, ಪರಿಣಾಮ ನೆಟ್ಟಗಿರಲ್ಲ’ ಎಂದು ಗುಡುಗಿದ್ದಾರೆ. ಅಲ್ಲದೆ, ಸಿಎಎ ವಿರೋಧಿ ಪ್ರತಿಭಟನಾಕಾರರು ಸಿಎಎ ಪರ ಪ್ರತಿಭಟನಾಕಾರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕಪಿಲ್‌ ಮಿಶ್ರಾ ದೂರಿದ್ದಾರೆ.

ಅಲಿಗಢದಲ್ಲಿ ಹಿಂಸಾಚಾರ:

ಉತ್ತರ ಪ್ರದೇಶದ ಅಲಿಗಢದ ಹಳೇ ನಗರದಲ್ಲಿ ಪೊಲೀಸರು ಹಾಗೂ ಸಿಎಎ ವಿರೋಧಿ ಪ್ರತಿಭಟನಾಕಾರರ ಮಧ್ಯೆ ನಡೆದ ಮಾರಾಮಾರಿ ಹಲವು ಭಾಗಗಳಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದೆ.

ಶನಿವಾರದಿಂದ ಸಿಎಎ ವಿರುದ್ಧ ಪ್ರತಿಭಟನೆ ಕೈಗೊಂಡಿರುವ ಮಹಿಳೆಯರು, ಭಾನುವಾರ ಈದ್ಗಾ ಮೈದಾನದತ್ತ ಪ್ರತಿಭಟನೆ ಮೆರವಣಿಗೆ ನಡೆಸಿದ್ದರು. ಈ ವೇಳೆ ಈದ್ಗಾದಲ್ಲಿ ಈಗಾಗಲೇ ಒಂದು ತಂಡ ಪ್ರತಿಭಟನೆ ಕೈಗೊಂಡಿರುವ ಕಾರಣ ಅಲ್ಲಿಗೆ ತೆರಳಲು ಪ್ರತಿಭಟನಾಕಾರರಿಗೆ ಅವಕಾಶ ಕಲ್ಪಿಸಲು ಪೊಲೀಸರು ನಿರಾಕರಿಸಿದರು. ಇದರಿಂದ ಆಕ್ರೋಶಭರಿತರಾದ ಪ್ರತಿಭಟನಾಕಾರರು, ಭಾನುವಾರ ಸಂಜೆ 5 ಗಂಟೆ ವೇಳೆಗೆ ಕೋಟ್ವಾಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕೋಟ್‌ ಎಂಬಲ್ಲಿ ಪೊಲೀಸರು, ನಿಂತಿದ್ದ ವಾಹನಗಳು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾರ್ವಜನಿಕರ ಆಸ್ತಿಗಳಿಗೆ ಬೆಂಕಿ ಹಚ್ಚುವ ಮುನ್ನ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಉದ್ರಿಕ್ತರ ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಈ ಮಹಿಳಾ ಪ್ರತಿಭಟನಾಕಾರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಲಿಗಢ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಚಂದ್ರಭೂಷಣ್‌ ಸಿಂಗ್‌ ಹೇಳಿದ್ದಾರೆ.