ಅಜಿತ್ ಪವಾರ್ ವಿಮಾನ ದುರಂತ ನಡೆದ ಅದೇ ಪ್ರದೇಶದಲ್ಲಿ ಇದೀಗ ಮತ್ತೊಂದು ವಿಮಾನ ಪತನಗೊಂಡಿದೆ. ರೆಡ್‌ಬರ್ಡ್ ಎವಿಯೇಶನ್ ವಿಮಾನ ಅಪಘಾತಕ್ಕೀಡಾಗಿದೆ. ಪದೆ ಪದೇ ಬಾರಾಮತಿಯಲ್ಲಿ ವಿಮಾನ ಪತನಗೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.
ಬಾರಾಮತಿ (ಮೇ.13) ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ಜನವರಿ ತಿಂಗಳಲ್ಲಿ ಈ ದುರ್ಘಟನೆ ನಡೆದಿತ್ತು. ಈ ಘಟನೆ ನಡೆದ ಕೆಲವೇ ತಿಂಗಳ ಅಂತರದಲ್ಲಿ ಇದೇ ಪ್ರದೇಶದಲ್ಲಿ ಇದೀಗ ಮತ್ತೊಂದು ವಿಮಾನ ಪತನಗೊಂಡಿದೆ. ರೆಡ್‌ಬರ್ಡ್ ಎವಿಯೇಶನ್ ತರಬೇತಿ ವಿಮಾನ ಪತನಗೊಂಡಿದೆ. ಈ ಘಟನೆ ಇದೀಗ ಬಾರಾಮತಿ ವಲಯದಲ್ಲಿ ವಿಮಾನ ಹಾರಾಟ ಹಾಗೂ ಸುರಕ್ಷತೆ ಕುರಿತು ಆತಂಕ ಮೂಡಿಸುವಂತೆ ಮಾಡಿದೆ.

ತರಬೇತಿ ವಿಮಾನ ಪತನ
ಬಾರಾಮತಿಯ ಗೊಜುಬಾವಿ ಗ್ರಾಮದ ಬಳಿ ವಿಮಾನ ಪತನಗೊಂಡಿದೆ. ತರಬೇತಿ ವಿಮಾನ ಇದಾಗಿದ್ದು, ಪೈಲೆಟ್ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅದೃಷ್ಠವಶಾಕ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಕ್ಷಣವೇ ಸ್ಥಳೀಯರು, ತುರ್ತು ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿ ಪೈಲೆಟ್ ರಕ್ಷಣೆ ಮಾಡಿದೆ.
ವಿಮಾನ ಪತನಕ್ಕೆ ಕಾರಣವೇನು?
ಪ್ರಾಥಮಿಕ ಮಾಹಿತಿ ಪ್ರಕಾರ ತರಬೇತಿ ವಿಮಾನ ಪತನಕ್ಕೆ ಕೆಲ ತಾಂತ್ರಿಕ ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಲೋ ಆಲ್ಟಿಟ್ಯೂಡ್‌ನಲ್ಲಿ ಹಾರಾಟ ನಡೆಸುತ್ತಿರುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅನಿವಾರ್ಯವಾಗಿ ತುರ್ತು ಲ್ಯಾಂಡಿಂಗ್ ಮಾಡಬೇಕಾಗಿತ್ತು. ಹೀಗಾಗಿ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ವಿಮಾನ ಪತನಗೊಂಡಿದೆ.
ಘಟನೆ ಕುರಿತು ಪುಣೆ ಗ್ರಾಮೀಣ ಪೊಲೀಸ್ ಎಸ್‌ಪಿ ಸಂದೀಪ್ ಸಿಂಗ್ ಗಿಲ್ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ 8.50ಕ್ಕೆ ಸುಮಾರಿಗೆ ರೆಡ್‌ಬರ್ಡ್ ಎವಿಯೇಶನ್ ಸಂಸ್ಥೆಗೆ ಸೇರಿದ ತರಬೇತಿ ವಿಮಾನ ಪತನಗೊಂಡಿದೆ. ಬಾರಾಮತಿ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಗೊಜುಬಾವಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನ ತುರ್ತು ಲ್ಯಾಂಡಿಂಗ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ತರಬೇತಿ ಪೈಲೆಟ್ ವಿಮಾನ ಲ್ಯಾಂಡಿಂಗ್ ಪ್ರಯತ್ನ ಮಾಡಿದ್ದಾರೆ. ಖಾಲಿ ಪ್ರದೇಶ ಇಲ್ಲದ ಕಾರಣ ಗೊಜುಬಾವಿ ಬಳಿಯ ಪ್ರದೇಶದಲ್ಲೇ ಲ್ಯಾಂಡಿಂಗ್ ಮಾಡಲಾಗಿದೆ. ಘಟನೆಯಲ್ಲಿ ತರಬೇತಿ ಪೈಲೆಟ್‌ಗೆ ಸಣ್ಣ ಗಾಯಗಳಾಗಿದೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಸಂದೀಪ್ ಸಿಂಗ್ ಗಿಲ್ ಹೇಳಿದ್ದಾರೆ.
ಅಜಿತ್ ಪವಾರ್ ವಿಮಾನ ಪತನ
ಜನವರಿ 28 ರಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮುಂಬೈನಿಂದ ವಿಮಾನ ಮೂಲಕ ಬಾರಾಮತಿಗೆ ತೆರಳಿದ್ದರು. ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ವಿಮಾನ ಪತನಗೊಂಡಿತ್ತು. ಈ ಘಟನೆಯಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಪೈಲೆಟ್, ಸಿಬ್ಬಂದಿ ಸೇರಿ ಎಲ್ಲರೂ ಮೃತಪಟ್ಟಿದ್ದರು.


