ಜಮ್ಮುಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ: ಕ್ಯಾಪ್ಟನ್ ಸೇರಿ ಐವರು ಯೋಧರು ಹುತಾತ್ಮ
ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಮುಂದುವರೆದಿದೆ. ಕಾಶ್ಮೀರದ ದೊಡಾ ಜಿಲ್ಲೆಯಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಮುಂದುವರೆದಿದೆ. ಕಾಶ್ಮೀರದ ದೊಡಾ ಜಿಲ್ಲೆಯಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆಯ ಕ್ಯಾಪ್ಟನ್ ಬ್ರಿಜೇಶ್ ಥಾಪಾ, ನೈಕ್ ಡಿ ರಾಜೇಶ್, ಸಿಪಾಯಿ ಬಿಜೇಂದ್ರ, ಹಾಗೂ ಸಿಪಾಯಿ ಅಜಯ್ ದೇಶದ ರಕ್ಷಣೆಯ ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಸೇನೆ ತಿಳಿಸಿದೆ.
ದೋಡಾದ ದೇಸ ಏರಿಯಾದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಸೋಮವಾರ ರಾತ್ರಿ 9 ಗಂಟೆಗೆ ಉಗ್ರರು ಹಾಗೂ ಭಾರತೀಯ ಸೇನೆಯ ಮಧ್ಯೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಕನಿಷ್ಠ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನೆ ಸೋಮವಾರ ರಾತ್ರಿಯೇ ವರದಿ ಮಾಡಿತ್ತು. ಆದರೆ ಈಗ ಆ ಯೋಧರೆಲ್ಲರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.
ಉಗ್ರರ ದಾಳಿ ಬೆದರಿಕೆ ನಡುವೆಯೂ 15 ದಿನದಲ್ಲಿ ಅಮರನಾಥಕ್ಕೆ 3 ಲಕ್ಷ ಭಕ್ತರು: ದಾಖಲೆ!
ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ದೋಡಾದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಈ ದುರಂತದಲ್ಲಿ ಮಡಿದ ಯೋಧರ ನಷ್ಟಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶ ಕಾಯುವ ಕಾಯಕದಲ್ಲಿ ಪ್ರಾಣಬಿಟ್ಟ ಯೋಧರ ಕುಟುಂಬದೊಂದಿಗೆ ದೇಶ ಧೃಡವಾಗಿ ನಿಲ್ಲಲಿದೆ. ಯೋಧರ ಸಾವಿನಿಂದ ಬಹಳ ಬೇಸರವಾಗಿದೆ. ಉಗ್ರರನ್ನು ಸದೆಬಡಿಯುವ ಕಾರ್ಯಾಚರಣೆ ಪ್ರಗತಿಯಲ್ಲಿದೆ ನಮ್ಮ ಯೋಧರು ಭಯೋತ್ಪಾದನೆಯ ನಿರ್ಮೂಲನೆಗೆ ಬದ್ಧರಾಗಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಇಂದಿನ ಈ ಘಟನೆಯೂ ಒಂದೇ ವಾರದಲ್ಲಿ ನಡೆದ ಮತ್ತೊಂದು ಭೀಕರ ದಾಳಿಯಾಗಿದೆ. ಕಳೆದ ವಾರವಷ್ಟೇ ಕಥುವಾದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು.ಅಲ್ಲದೇ ಈ ದಾಳಿಯಲ್ಲಿ ಇನ್ನೂ ಐವರು ಯೊಧರು ಹುತಾತ್ಮರಾಗಿದ್ದರು. 12 ಟ್ರೂಪ್‌ಗಳನ್ನು ಕರೆತರುತ್ತಿದ್ದ ಟ್ರಕ್ ಮೇಲೆ ಉಗ್ರರು ಸಂಘಟಿತ ದಾಳಿ ನಡೆಸಿದ್ದರು. 500 ಮೀಟರ್ ದೂರದಿಂದ ಟ್ರಕ್‌ನ್ನು ಟಾರ್ಗೆಟ್ ಮಾಡಿದ ಉಗ್ರರು ಗ್ರೇನೆಡ್‌ನಿಂದ ದಾಳಿ ಮಾಡಿದ್ದರು.
ಭಾರತೀಯ ಸೇನಾ ವಾಹನ ಗುರಿಯಾಗಿಸಿ ಉಗ್ರರ ದಾಳಿ, ನಾಲ್ವರು ಯೋಧರು ಹುತಾತ್ಮ!
ಕೆಲ ವರ್ಷಗಳ ಹಿಂದೆ ಭಯೋತ್ಪಾದನೆಯಿಂದ ಮುಕ್ತವಾಗಿದ್ದ ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಭಯೋತ್ಪಾದನೆ ಹೆಚ್ಚಳವಾಗಿದೆ. ಮೊದಲಿಗೆ ಪೂಂಛ್ ಹಾಗೂ ರಾಜೌರಿ ಜಿಲ್ಲೆಯಲ್ಲಿ ಆರಂಭವಾಗಿರುವ ಭಯೋತ್ಪಾದನೆ ಈಗ ಜಮ್ಮುವಿನಾದ್ಯಂತ ಹಬ್ಬಿದೆ. ಕಳೆದ 32 ತಿಂಗಳುಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಒಟ್ಟು 48 ಯೋಧರು ಹುತಾತ್ಮರಾಗಿದ್ದಾರೆ. ಕೆಲ ವರದಿಗಳ ಪ್ರಕಾರ ವಿದೇಶದಲ್ಲಿ ಜಂಗಲ್ ವಾರ್‌ಫೇರ್‌ನಲ್ಲಿ ತರಬೇತಿ ಪಡೆದಿರುವ 60ಕ್ಕೂ ಹೆಚ್ಚು ಉಗ್ರರು ಈ ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದ್ದು, ಎಲ್ಲಾ 10 ಜಿಲ್ಲೆಗಳಲ್ಲೂ ಇವರು ಕಾರ್ಯಾಚರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಕಳೆದ ತಿಂಗಳಷ್ಟೇ ಪ್ರಧಾನಿ ಮೋದಿಯವರು ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೇನೆಗೆ ಸೂಚಿಸಿದ್ದರು.