* ವಿದ್ಯ​ಮಾ​ನ​ಗಳು ಪಂಜಾಬ್‌ ಹಿತ ಕಾಪಾ​ಡು​ವು​ದಿ​ಲ್ಲ* ರಾಜ್ಯದ ಸ್ಥಿರತೆ ಮೇಲೆ ಈ ಬೆಳ​ವ​ಣಿ​ಗೆ​ಗಳ ಪರಿ​ಣಾ​ಮ* ರಾಜೀನಾಮೆಗೂ ಮುನ್ನ ಸೋನಿಯಾಗೆ ಸಿಂಗ್‌ ಪತ್ರ* 5 ತಿಂಗಳ ವಿದ್ಯ​ಮಾ​ನದ ಬಗ್ಗೆ ಅಮ​ರೀಂದರ್‌ ಬೇಸ​ರ

ಚಂಡೀಗಢ(ಸೆ.20): ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ಸಿಂಗ್‌ ಸಿಧು ಜೊತೆಗಿನ ಸಂಘರ್ಷ ಮತ್ತು ಈ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಧೋರಣೆಗೆ ಬೇಸತ್ತು ಶನಿವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಮರೀಂದರ್‌ ಸಿಂಗ್‌, ಅದಕ್ಕೂ ಮುನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ರಾಜೀನಾಮೆ ಘೋಷಣೆಗೂ ಮುನ್ನ ಶನಿವಾರ ಸೋನಿಯಾಗೆ ಬರೆದ ಪತ್ರದಲ್ಲಿ ‘ಕಳೆದ 5 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಖಂಡಿತವಾಗಿಯೂ ಪಂಜಾಬ್‌ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಅದರ ಪ್ರಮುಖ ಆತಂಕಗಳನ್ನು ಆಧರಿಸಿಲ್ಲ. ಈ ಬೆಳವಣಿಗೆಗಳು ರಾಜ್ಯದ ಸ್ಥಿರತೆ ಮೇಲೆ ಪರಿಣಾಮ ಬೀರಬಹುದು. ನನ್ನ ವೈಯಕ್ತಿಕ ಆಕ್ರೋಶದ ಹೊರತಾಗಿಯೂ, ಕಷ್ಟಪಟ್ಟು ರಾಜ್ಯದಲ್ಲಿ ಸ್ಥಾಪಿಸಲಾದ ಶಾಂತಿ ಮತ್ತು ಅಭಿವೃದ್ಧಿ ಮತ್ತು ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಲು ನಾನು ಹಲವು ವರ್ಷಗಳಿಂದ ನಡೆಸಿದ ಪ್ರಯತ್ನಗಳಿಗೆ ಯಾವುದೇ ಹಾನಿ ಉಂಟು ಮಾಡಲಾರದು ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.

ಜೊತೆಗೆ ‘ಪಂಜಾಬ್‌ ಒಂದು ಗಡಿ ರಾಜ್ಯವಾಗಿ ಭೌಗೋಳಿಕವಾಗಿ ಮತ್ತು ಇತರೆ ಆಂತರಿಕ ಭದ್ರತಾ ಕಳವಳಗಳನ್ನು ಹೊಂದಿದೆ. ಅದನ್ನು ನಾನು ಹಲವು ವರ್ಷಗಳಿಂದ ಯಾವುದೇ ರಾಜೀ ಇಲ್ಲದೇ ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇನೆ’ ಎನ್ನುವ ಮೂಲಕ ಸಿಧು ಮತ್ತು ಪಾಕ್‌ ನಾಯಕರ ಜೊತೆಗಿನ ಆತ್ಮೀಯ ಸಂಬಂಧವು, ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ.