* ಮಕ್ಕಳ ಮೇಲೆ ಕೋವಿಡ್‌ ಪರಿಣಾಮ ಅಷ್ಟಿಲ್ಲ* ಶಾಲೆ ಮುಚ್ಚಿದರೆ ಮಕ್ಕಳ ಭವಿಷ್ಯಕ್ಕೆ ಕುತ್ತು: ಸಚಿವ* ಕೇಸು ಹೆಚ್ಚಾದರೂ ಆಂಧ್ರದಲ್ಲಿ ಶಾಲೆ ಬಂದ್‌ ಇಲ್ಲ

ಅಮರಾವತಿ(ಜ.19): ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದರೂ ಆಂಧ್ರಪ್ರದೇಶದಲ್ಲಿ ಶಾಲೆಗಳನ್ನು ಮುಚ್ಚದಿರಲು ನಿರ್ಧರಿಸಲಾಗಿದೆ.

ಸಂಕ್ರಾಂತಿಯ ಒಂದು ವಾರದ ನಂತರ ಸೋಮವಾರದಿಂದ ಮತ್ತೆ ಶಾಲೆಗಳು ಆರಂಭವಾಗಿವೆ. ಕೋವಿಡ್‌ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿರುವ ಕಾರಣ ಮಕ್ಕಳ ಹಾಜರಾತಿ ಕಡಿಮೆಯಿದೆ. ಆದರೂ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಆಫ್‌ಲೈನ್‌ ಮಾದರಿಯಲ್ಲೇ ಶಾಲೆಗಳಲ್ಲಿ ಪಾಠವನ್ನು ಮುಂದುವರೆಸಲಾಗುವುದು ಎಂದು ಶಿಕ್ಷಣ ಸಚಿವ ಆದಿಮೂಲಪು ಸುರೇಶ್‌ ತಿಳಿಸಿದ್ದಾರೆ.

ಕೋವಿಡ್‌ನಿಂದಾಗಿ ಕಳೆದ ವರ್ಷ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ತೇರ್ಗಡೆಗೊಳಿಸಲಾಗಿತ್ತು. ಆದರೆ ಇದೇ ಮುಂದುವರೆದರೆ ಮಕ್ಕಳು ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಶಿಕ್ಷಕರೆಲ್ಲರೂ ಈಗಾಗಲೇ ಕೋವಿಡ್‌ ಲಸಿಕೆಯನ್ನು ಪಡೆದಿದ್ದಾರೆ. ಶೇ. 90ರಷ್ಟು15 ವರ್ಷಕ್ಕಿಂತ ಮೇಲ್ಪಟ್ಟಮಕ್ಕಳೂ ಕೂಡಾ ಲಸಿಕೆ ಪಡೆದಿದ್ದಾರೆ. ಮಕ್ಕಳ ಮೇಲೆ ಕೋವಿಡ್‌ ಪರಿಣಾಮ ಅಷ್ಟಿಲ್ಲ ಎಂದೂ ಹೇಳಲಾಗಿದೆ. ಹೀಗಾಗಿ ಪಾಲಕರು ನಿಶ್ಚಿಂತರಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದಿದ್ದಾರೆ.

ಕೋವಿಡ್‌ ಸ್ಫೋಟದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಇತರೆ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು ಶಾಲೆಗಳನ್ನು ಮುಚ್ಚಿ ಆನ್‌ಲೈನ್‌ ತರಗತಿಯನ್ನು ಆರಂಭಿಸಿವೆ.