* 25 ಕೋಟಿ ರು. ವೆಚ್ಚದ ವ್ಯವಸ್ಥೆ ಅಳವಡಿಕೆಗೆ ಟಿಟಿಡಿ ನಿರ್ಧಾರ* ತಿಮ್ಮಪ್ಪನ ದೇಗುಲ ರಕ್ಷಣೆಗೆ ‘ಡ್ರೋನ್‌ ದಾಳಿ ತಡೆ ವ್ಯವಸ್ಥೆ’* ಈ ವ್ಯವಸ್ಥೆ ಹೊಂದಲಿರುವ ದೇಶದ ಮೊದಲ ದೇಗುಲ

ತಿರುಪತಿ(ಜು.24): ತಿರುಮಲದ ವಿಶ್ವ ಪ್ರಸಿದ್ಧ ವೆಂಕಟೇಶ್ವರ ದೇವಾಲಯವು ಡ್ರೋನ್‌ ದಾಳಿ ತಡೆ ವ್ಯವಸ್ಥೆ ಹೊಂದಲು ನಿರ್ಧರಿಸಿದೆ. ಈ ವ್ಯವಸ್ಥೆ ಅಳವಡಿಕೆಯಾದ ಬಳಿಕ ಇಂಥ ಭದ್ರತೆ ಹೊಂದಿರುವ ದೇಶದ ಪ್ರಥಮ ದೇವಾಲಯ ಎಂಬ ಹೆಗ್ಗಳಿಕೆಗೆ ತಿರುಪತಿ ದೇಗುಲ ಪಾತ್ರವಾಗಲಿದೆ.

ಇತ್ತೀಚೆಗೆ ಜಮ್ಮು ವಾಯುಪಡೆ ಘಟಕದ ಮೇಲೆ ಪಾಕಿಸ್ತಾನಿ ಡ್ರೋನ್‌ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಡ್ರೋನ್‌ ದಾಳಿ ತಡೆಯುವ ತಂತ್ರಜ್ಞಾನ ಹೊಂದಿರುವ ವ್ಯವಸ್ಥೆಯನ್ನು ಜುಲೈನಲ್ಲಿ ಕರ್ನಾಟಕದ ಕೋಲಾರದಲ್ಲಿ ಪ್ರದರ್ಶಿಸಿತ್ತು. ಈ ಪ್ರದರ್ಶನದಲ್ಲಿ ಹಲವಾರು ಸಂಸ್ಥೆಗಳು ಪಾಲ್ಗೊಂಡಿದ್ದು, ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ಭದ್ರತಾ ವಿಭಾಗದ ಮುಖ್ಯಸ್ಥ ಗೋಪಿನಾಥ ಜತ್ತಿ ಇದರಲ್ಲಿದ್ದರು.

ಈ ವ್ಯವಸ್ಥೆಗೆ ಟಿಟಿಡಿ ಈಗ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲಿ ಇದು ಅಳವಡಿಕೆ ಆಗುವ ನಿರೀಕ್ಷೆಯಿದ್ದು, ತಿಮ್ಮಪ್ಪನ ದೇಗುಲದ ಮೇಲೆ ನಡೆಯಬಹುದಾದ ಯಾವುದೇ ಸಂಭಾವ್ಯ ಡ್ರೋನ್‌ ದಾಳಿಯನ್ನು ತಪ್ಪಿಸಲಿದೆ.

ಡ್ರೋನ್‌ ದಾಳಿ ತಡೆಯ ಒಂದು ವ್ಯವಸ್ಥೆಗೆ 25 ಕೋಟಿ ರು. ಖರ್ಚಾಗುತ್ತದೆ. 100ಕ್ಕೂ ಹೆಚ್ಚು ವ್ಯವಸ್ಥೆಗೆ ಬೇಡಿಕೆ ಸಲ್ಲಿಸಿದರೆ ತಲಾ 22 ಕೋಟಿ ರು.ಗೆ ಲಭಿಸುತ್ತದೆ. ಯಾವುದೇ ಡ್ರೋನ್‌ ಬರುತ್ತಿದ್ದರೆ, 4 ಕಿಮೀ ವ್ಯಾಪ್ತಿಯಲ್ಲಿ ಅದನ್ನು ಪತ್ತೆ ಹಚ್ಚಿ ಜಾಮ್‌ ಮಾಡಲಿದೆ. ಡ್ರೋನ್‌ 150 ಮೀ.ನಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಇದ್ದರೆ ಅದನ್ನು ನಾಶಗೊಳಿಸಲಿದೆ.

ಡಿಆರ್‌ಡಿಒ ಸಂಶೋಧನೆಯ ಈ ಡ್ರೋನ್‌ ತಡೆ ವ್ಯವಸ್ಥೆಯ ಉತ್ಪಾದನೆ ಹೊಣೆ ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿ. (ಬಿಇಎಲ್‌) ಕಂಪನಿಯದ್ದು.