* ಆಂಧ್ರಪ್ರದೇಶದ ಗುಂಟೂರಿನ ಜಿನ್ನಾ ಟವರ್ ವಿವಾದ* ವಿವಾದದ ನಡುವೆಯೇ ಆಂಧ್ರಪ್ರದೇಶದ ಗುಂಟೂರಿನ ಜಿನ್ನಾ ಟವರ್ ಗೆ ತ್ರಿವರ್ಣ ಬಣ್ಣ* ಶೀಘ್ರದಲ್ಲೇ ರಾಷ್ಟ್ರಧ್ವಜ ಹಾರಾಟ
ಹೈದರಾಬಾದ್(ಫೆ.02): ಆಂಧ್ರಪ್ರದೇಶದ ಗುಂಟೂರಿನ ಜಿನ್ನಾ ಟವರ್ ವಿವಾದದ ನಡುವೆಯೇ ಆಂಧ್ರಪ್ರದೇಶದ ಗುಂಟೂರಿನ ಜಿನ್ನಾ ಟವರ್ ಗೆ ತ್ರಿವರ್ಣ ಬಣ್ಣ ಬಳಿಯಲಾಗಿದೆ. ಇಲ್ಲಿ ಶೀಘ್ರದಲ್ಲೇ ರಾಷ್ಟ್ರಧ್ವಜ ಹಾರಿಸಲಾಗುವುದು. ಜನವರಿಯಲ್ಲಿ ಕೆಲವರು ಜಿನ್ನಾ ಟವರ್ ಗೆ ಪ್ರವೇಶಿಸಿದ್ದರು. ಬಳಿಕ ಇಲ್ಲಿ ತ್ರಿವರ್ಣ ಧ್ವಜ ಹಾರಿಸಿದ ವಿಚಾರ ಕಾವು ಪಡೆದಿತ್ತು. ಗುಂಟೂರಿನ ಮಾಜಿ ಶಾಸಕ ಮೊಹಮ್ಮದ್ ಮುಸ್ತಫಾ ಇದಕ್ಕೆ ತ್ರಿವರ್ಣ ಧ್ವಜದ ಬಣ್ಣ ಬಳಿದಿದ್ದರು. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳು ಮುಂದೆ ಬಂದಿದ್ದವು ಹೀಗಾಗಿ ಗೋಪುರಕ್ಕೆ ಬಣ್ಣ ಬಳಿಯಲು ನಿರ್ಧರಿಸಲಾಯಿತು. ತ್ರಿವರ್ಣ ಧ್ವಜದ ಬಣ್ಣದಿಂದ ಸಿಂಗರಿಸಿ, ಈ ಗೋಪುರದ ಮೇಲೆ ಕಂಬವನ್ನು ಸ್ಥಾಪಿಸಲಾಗಿದೆ, ಫೆಬ್ರವರಿ 3 ರಂದು ಅದರ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ.
ಜನವರಿ 26 ರಂದು ತ್ರಿವರ್ಣ ಧ್ವಜವನ್ನು ಹಾರಿಸುವ ಬಗ್ಗೆ ವಿವಾದ
ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜವನ್ನು ಹಾರಿಸಲು ಕೆಲವರು ಜಿನ್ನಾ ಗೋಪುರವನ್ನು ಪ್ರವೇಶಿಸಿದ್ದರು. ಆದರೆ, ವಿವಾದ ತಡೆಯಲು ಪೊಲೀಸರು ಅವರನ್ನು ಬಂಧಿಸಿದ್ದರು. ಬಿಜೆಪಿಯ ಆಂಧ್ರಪ್ರದೇಶ ಘಟಕವು ಈ ಬಗ್ಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಗುಂಟೂರು ಮಹಾನಗರ ಪಾಲಿಕೆ ಆಯುಕ್ತ ಚಲ್ಲಾ ಅನುರಾಧ ಅವರಿಗೆ ಮನವಿ ಸಲ್ಲಿಸಿತ್ತು. ಇದರಲ್ಲಿ ಗೋಪುರಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೆಸರಿಡಬೇಕು ಎಂಬ ಆಗ್ರಹ ಕೇಳಿಬಂದಿತ್ತು.
ಮತ್ತೊಂದೆಡೆ, ಮೊಹಮ್ಮದ್ ಮುಸ್ತಫಾ ಈ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿಯನ್ನು ಟೀಕಿಸಿದರು. ಬಿಜೆಪಿ ನಾಯಕರು ಕೋಮು ಘರ್ಷಣೆಗೆ ಪ್ರಚೋದನೆ ನೀಡುವ ಬದಲು ಕೊರೋನಾ ಸಾಂಕ್ರಾಮಿಕದ ನಡುವೆ ಜನರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದ್ದರು. ಏತನ್ಮಧ್ಯೆ, ಮುಸ್ತಫಾ ಅವರು ಜಿಎಂಸಿ ಮೇಯರ್ ಕವಾಟಿ ಮನೋಹರ್ ನಾಯ್ಡು ಅವರೊಂದಿಗೆ ಮಂಗಳವಾರ ಜಿನ್ನಾ ಟವರ್‌ನಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಮುಖಂಡರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಸ್ವಾತಂತ್ರ್ಯದ ನಂತರ ಕೆಲವು ಮುಸ್ಲಿಮರು ದೇಶವನ್ನು ತೊರೆದು ಪಾಕಿಸ್ತಾನಕ್ಕೆ ಹೋದರು. ಆದರೆ ಭಾರತದೊಂದಿಗೆ ಇರಲು ನಿರ್ಧರಿಸಿದವರು ತಮ್ಮ ಮಾತೃಭೂಮಿಯನ್ನು ಪ್ರೀತಿಸುತ್ತಾರೆ ಎಂದಿದ್ದಾರೆ.
