ಹೈದರಾಬಾದ್(ಅ.13): ಆಂಧ್ರಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ಇನ್ನಿತರೆ ನಾಲ್ವರು ನ್ಯಾಯಮೂರ್ತಿಗಳ ವಿರುದ್ಧವೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ದೂರಿನ ಪತ್ರವನ್ನು ಆಂಧ್ರ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಅವರು ಬರೆದ ಕಂಡುಕೇಳರಿಯದ ಬೆಳವಣಿಗೆ ಮತ್ತಷ್ಟುತಿರುವು ಪಡೆದುಕೊಂಡಿದೆ. ಆಂಧ್ರಪ್ರದೇಶ ಹೈಕೋರ್ಟ್‌ ನೀಡಿರುವ ತೀರ್ಪುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನಕಾರಿ ಪೋಸ್ಟ್‌ಗಳನ್ನು ಮಾಡಲಾಗಿದೆ. ಈ ಸಂಬಂಧ ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೆ ಆಡಳಿತಾರೂಢ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ 49 ನಾಯಕರು ಹಾಗೂ ಕಾರ್ಯಕರ್ತರಿಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆಯಲಾಗಿರುವ ಆಕ್ಷೇಪಾರ್ಹ ಪ್ರತಿಕ್ರಿಯೆಗಳು ನ್ಯಾಯಾಂಗದ ಪ್ರತಿಷ್ಠೆಗೆ ಕುಂದು ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನ್ಯಾಯಾಧೀಶರ ವಿರುದ್ಧ ಕೀಳು ಹೇಳಿಕೆಗಳನ್ನು ಪ್ರಕಟಿಸುತ್ತಿರುವ ಎಲ್ಲ ವ್ಯಕ್ತಿಗಳ ವಿರುದ್ಧ ತನಿಖೆಯನ್ನು ಸಿಬಿಐ ತನಿಖೆ ನಡೆಸಬೇಕು. ಹೈಕೋರ್ಟ್‌ ತೀರ್ಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ಹೀಗಾಗಿ ಈ ತನಿಖೆಯಲ್ಲಿ ರಾಜ್ಯ ಸರ್ಕಾರ ಕೂಡ ಸಿಬಿಐಗೆ ಸಹಕಾರ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಹಿರಿಯ ನ್ಯಾಯಾಧೀಶರೊಬ್ಬರು ಚುನಾಯಿತ ಸರ್ಕಾರದ ವಿರುದ್ಧ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಪಕ್ಷ ತೆಲುಗುದೇಶಂ ಅಣತಿಯಂತೆ ವರ್ತನೆ ತೋರುತ್ತಿದ್ದಾರೆ. ಆ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಸಿಎಂ ಜಗನ್ಮೋಹನ ರೆಡ್ಡಿ ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರಿಗೆ ಪತ್ರ ಬರೆದಿದ್ದರು.