ನವದೆಹಲಿ(ಆ.30) ನಾರ್ವೆಯ ಡಿಪ್ಲೋಮ್ಯಾಟ್ ಎರಿಕ್ ಸೋಲ್ಹೆಮ್ ಮಾಡಿದ ಟ್ವೀಟ್ ಒಂದು ಉದ್ಯಮಿ ಆನನಂದ್ ಮಹೀಂದ್ರಾರ ಮನ ಗೆದ್ದಿದೆ. ಅವರ ಪೋಸ್ಟ್ ಮಹೀಂದ್ರಾರಿಗೆ ಅದೆಷ್ಟು ಹಿಡಿಸಿದೆ ಎಂದರೆ ಅವರದನ್ನು ರೀಟ್ವೀಟ್ ಮಾಡಿ, ನಿತಿನ್ ಗಡ್ಕರಿಗಗೆ ಮನವಿಯೊಂದನ್ನೂ ಮಾಡಿದ್ದಾರೆ. 

ಹೌದು ಎರಿಕ್ ಸೇತುವೆಯೊಂದರ ಫೋಟೋ ಒಂದನ್ನು ಟ್ವೀಟ್ ಮಾಡಿ, ಅಭಿವೃದ್ಧಿಯೊಂದಿಗೆ ಪ್ರಕೃತಿಯ ಕಾಳಜಿ ವಹಿಸುವುದು ಎಷ್ಟು ಅಗತ್ಯ ಎಂಬುವುದನ್ನೂ ತೋರಿಸಿದ್ದಾre. ಅಂದರೆ ಹಸಿರು ಪ್ರಕೃತಿ ಇದ್ದೇ ಅಭಿವೃದ್ಧಿ ಸಾಧ್ಯ ಎಂದು ತೋರಿಸಿದ್ದಾರೆ.

ಎರಿಕ್ ಟ್ವೀಟ್ ಮಾಡಿರುವ ಸೇತುವೆ ನೆದರ್‌ಲ್ಯಾಂಡ್‌ನ ಒಂದು ಸೇತುವೆಯದ್ದಾಗಿದೆ. ಇದನ್ನು ಇಕೋಡಕ್ಟ್‌ ಎಂದೂ ಕರೆಯಲಾಗುತ್ತದೆ. ಇದು ರಸ್ತೆಯ ಇಕ್ಕೆಲಗಳಲ್ಲಿರುವ ಅರಣ್ಯವನ್ನು ಜೋಡಿಸುವುದೇ ಇದರ ವಿಶೇಷತೆ. ಈ ಮೂಲಕ ಕಾಡು ಪ್ರಾಣಿಗಳು ಜೀವ ಪಣಕ್ಕಿಟ್ಟುಕೊಳ್ಳದೆ ರಸ್ತೆ ದಾಟಬಹುದು. ಇನ್ನು ಈ ಸೇತುವೆ ಕೂಡಾ ಕಾಂಕ್ರೀಟ್‌ನಿಂದ ನಿರ್ಮಿಸಿಲ್ಲ, ಅದರ ಮೇಲೂ ಹಸಿರಾದ ಗಿಡ ಮರಗಳಿವೆ.

ಆನಂದ್ ಮಹೀಂದ್ರಾ ಹೇಳಿದ್ದೇನು?

ಈ ಬ್ರಿಜ್ ಫೋಟೋ ಇರುವ ಟ್ವೀಟ್‌ನ್ನು ರೀ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅಭಿವೃದ್ಧಿ ಹಾಗೂ ಪ್ರಕೃತಿ ಇವೆರಡೂ ಒಟ್ಟಿಗೆ ಇರಿಸುವುದಕ್ಕೆ ಇದು ಅತ್ಯತ್ತಮ ಉಪಾಯ. ಅಲ್ಲದೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡುತ್ತಾ, ಭಾರತದಲ್ಲೂ ಯಾವುದಾದರೂ ಹೆದ್ದಾರಿ ನಿರ್ಮಿಸುವಾಗ ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬಹುದೇ? ಎಂದು ಕೇಳಿದ್ದಾರೆ. ಒಂದು ವೇಳೆ ಸಚಿವ ಗಡ್ಕರಿಯವರು ಇದನ್ನು ಬಳಸಿಕೊಂಡರೆ ತಾನು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತೇನೆಂದಿದ್ದಾರೆ

ಇನ್ನು ಮಹೀಂದ್ರಾರ ಈ ಟ್ವೀಟ್‌ಗೆ ಕೆಲವೇ ತಾಸಿನಲ್ಲಿ ಪ್ರತಿಕ್ರಿಯಿಸಿರುವ ನಿತಿನ್ ಗಡ್ಕರಿ ನಿಮ್ಮ ಸಲಹೆಗೆ ಧನ್ಯವಾದಗಳು. ನಾವು ಇಂತಹ ಆವಿಷ್ಕಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಮೂಲಕ ಪರಿಸರ ಸಮತೋಲನ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಜೊತೆಗೆ ಮೂರು ಫೋಟೋಗಳನನ್ನೂ ಟ್ವೀಟ್ ಮಾಡಿದ್ದು, ಇದರಲ್ಲಿ ಯಾವ ರೀತಿ ಹೆದ್ದಾರಿ ನಿರ್ಮಿಸುವಾಗ ಇಂತಹ ವಿಚಾರಗಳನ್ನು ಗಮನದಟ್ಟುಕೊಂಡಿದ್ದಾರೆಂಬುವುದನ್ನು ತೋರಿಸಿದ್ದಾರೆ. ಇಲ್ಲಿ ಸೇತುವೆ ಮೇಲೆ ಹೆದ್ದಾರಿ ನಿರ್ಮಿಸಲಾಗಿದ್ದು, ಪ್ರಾಣಿಗಳು ಕೆಳಬದಿಯಲ್ಲಿ ಸ್ವಚ್ಛಂದವಾಗಿ ಓಡಾಡಬಹುದಾಗಿದೆ.