ಸುನಕ್ ಆಯ್ಕೆ ಬೆನ್ನಲ್ಲೇ ಆನಂದ್ ಮಹೀಂದ್ರ ಟ್ವೀಟ್, ಚರ್ಚಿಲ್ ಮಾತು ನೆನೆಪಿಸಿ ಬ್ರಿಟಿಷರಿಗೆ ಕಪಾಳಮೋಕ್ಷ!
ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತೀಯ ಮೂಲಕ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಉದ್ಯಮಿ ಆನಂದ್ ಮಹೀಂದ್ರ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ. ಈ ಟ್ವೀಟ್‌ನಲ್ಲಿ 1947ರ ಸ್ವಾತಂತ್ರ್ಯ ಸಂದರ್ಭದಲ್ಲಿ ವಿನ್‌ಸ್ಟನ್ ಚರ್ಚಿಲ್ ಹೇಳಿದ ಮಾತನ್ನೇ ನನೆಪಿಸಿ ಇದೀಗ ಬ್ರಿಟಿಷರ ಚುಚ್ಚಿದ್ದಾರೆ.
ನವದೆಹಲಿ(ಅ.24): ಬ್ರಿಟನ್ ಪ್ರಧಾನಿಯಾಗಿ ಕನ್ಸರ್ವೇಟೀವ್ ಪಕ್ಷದ ನಾಯಕ, ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಏಷ್ಯಾ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗಿದ್ದಾರೆ. ಭಾರತವನ್ನು ಆಳಿದ ಬ್ರಿಟಿಷರ ನಾಡಿನ ಆಡಳಿತ ಇದೀಗ ಭಾರತೀಯನ ಕೈಗೆ ಸಿಕ್ಕಿದೆ. ಈ ಕುರಿತು ಉದ್ಯಮಿ ಆನಂದ್ ಮಹೀಂದ್ರ ಮಾಡಿರುವ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ. 1947ರಲ್ಲಿ ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ವಿನ್‌ಸ್ಟಂಟ್ ಚರ್ಚಿಲ್ ಹೇಳಿದ ಮಾತನ್ನೇ ಪುನರುಚ್ಚರಿಸಿ, ಬ್ರಿಟಿಷರಿಗೆ ಕಪಾಳಮೋಕ್ಷ ಮಾಡಿದ್ದಾರೆ. 1947ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿತು. ಈ ವೇಳೆ ಚರ್ಚಿಲ್, ಎಲ್ಲಾ ಭಾರತೀಯ ನಾಯಕರು ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ. ಇಷ್ಟೇ ಅಲ್ಲ ದೇಶ ಮುನ್ನಡೆಸುವ ಶಕ್ತಿ ಇಲ್ಲದವರಾಗಿದ್ದಾರೆ ಎಂದಿದ್ದರು. 75ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಇದೀಗ ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗಿದ್ದಾರೆ. ಬದುಕು ಸುಂದರವಾಗಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಹಿಂದೆ ಭಾರತೀಯರನ್ನು ನಿಷ್ಪ್ರಯೋಜಕ ಎಂದಿದ್ದ ಚರ್ಚಿಲ್ ಹಾಗೂ ನಂತರದ ಹಲವು ಬ್ರಿಟಿಷ್ ನಾಯಕರಿಗೆ ತಕ್ಕ ತಿರುಗೇಟು ಇದಾಗಿದೆ. ವಿಶ್ವದ ಪ್ರಮುಖ ಕಂಪನಿಗಳು, ಕಾರ್ಪೋರೇಟ್ ಕ್ಷೇತ್ರದ ಮುಖ್ಯಸ್ಥರು ಭಾರತೀಯರಾಗಿದ್ದಾರೆ. ಇದೀಗ ವಿಶ್ವದಲ್ಲೇ ಬಲಿಷ್ಠ ಎಂದು ಗುರುತಿಸಿಕೊಂಡಿರುವ ದೇಶಗಳ ಆಡಳಿತ ಇದೀಗ ಭಾರತೀಯರ ಕೈಗೆ ಸಿಗುತ್ತಿದೆ. ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ ಭಾರತೀಯ ಮೂಲಕ ಕಮಲಾ ಹ್ಯಾರಿಸ್. ಹೀಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಹಾಗೂ ಹಿಡಿಯುತ್ತಿರುವವರ ಪಟ್ಟಿ ಬೆಳೆಯುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಪ್ರಮುಖ ದೇಶಗಳ ನಿರ್ಧಾರವನ್ನು ಭಾರತೀಯರೇ ತೆಗೆದುಕೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಭಾರತೀಯನ ಕೈಗೆ ಬ್ರಿಟಿಷ್ ಆಡಳಿತ, ಯುಕೆ ಪ್ರಧಾನಿಯಾಗಿ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಆಯ್ಕೆ!
ಈ ನಿಟ್ಟಿನಲ್ಲಿ ಆನಂದ್ ಮಹೀಂದ್ರ ಮಾಡಿರುವ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ. ಭಾರತದ ಮೇಲೆ ಹಲವು ದಾಳಿಗಳು ನಡೆದಿದೆ. ಹಲವರು ಇಡೀ ದೇಶವನ್ನು ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿ ಭಾರತವನ್ನು ನಿರ್ನಾಮ ಮಾಡುವ ಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಭಾರತೀಯರ ಬುದ್ಧಿವಂತಿಕೆ, ಭಾರತೀಯರ ಸಾಮರ್ಥ್ಯದಿಂದ ಒಂದೊಂದು ದೇಶದ ಆಡಳಿತ ಚುಕ್ಕಾಣಿ ಕೈಗೆ ಬರುತ್ತಿದೆ. ಈ ಮೂಲಕ ಆಧುನಿಕ ರೀತಿಯಲ್ಲಿ ಭಾರತ ಹಳೇ ಸೇಡನ್ನು ಯಾವುದೇ ದುರುದ್ದೇಶವಿಲ್ಲದೆ ತೀರಿಸಿಕೊಳ್ಳಲಿದೆ ಎಂದು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಇತ್ತೀಚೆಗೆ ರಿಷಿ ಸುನಕ್ ವಿರುದ್ಧ ಹಲವು ಟೀಕೆಗಳು ಕೇಳಿಬಂದಿತ್ತು. ರಿಷಿ ಸುನಕ್ ಭಾರತೀಯನೋ, ಬ್ರಿಟನ್ ಪ್ರಜೆಯೋ. ಹಿಂದೂ ಬ್ರಿಟನ್ ಪ್ರಧಾನಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವರು ಟೀಕಿಸಿದ್ದರು. ಈ ವೇಳೆ ಸುನಕ್ ತಕ್ಕ ತಿರುಗೇಟು ನೀಡಿದ್ದರು. ನಾನು ಬ್ರಿಟನ್ ಪ್ರಜೆ. ಆದರೆ ನನ್ನ ಧರ್ಮ ಹಿಂದೂ, ನನ್ನ ಧರ್ಮ ಹಾಗೂ ಸಂಸ್ಕೃತಿಯ ಮೂಲ ಭಾರತ. ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಿಂದೆ ಎಂದು ರಿಷಿ ಸುನಕ್ ಹೇಳಿದ್ದರು. ಈ ಉತ್ತರ ಹಲವು ಟೀಕೆಗಳನ್ನು ಬಾಯಿ ಮುಚ್ಚಿಸಿತ್ತು.