ಜಬಲ್ಪುರ[ಜ.13]: ‘ಪೌರತ್ವ ತಿದ್ದುಪಡಿ ಕಾಯ್ದೆಯ ಅನ್ವಯ ಪಾಕಿಸ್ತಾನದ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡಿಸುವವರಗೆ ಕೇಂದ್ರ ಸರ್ಕಾರ ವಿರಮಿಸುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೃಢ ಸ್ವರದಲ್ಲಿ ಹೇಳಿದರು.

ಭಾನುವಾರ ಇಲ್ಲಿ ಬಿಜೆಪಿ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಎಷ್ಟೇ ವಿರೋಧಿಸಲಿ. ಪಾಕಿಸ್ತಾನಿ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡಿಸುವವರೆಗೆ ಸರ್ಕಾರ ವಿರಮಿಸಲ್ಲ. ನಮ್ಮನ್ನು ತಡೆಯಲು ಯಾರಿಂದಲೂ ಆಗದು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಾನು ಸವಾಲು ಹಾಕುತ್ತೇನೆ. ಈ ಕಾಯ್ದೆಯಿಂದ ಭಾರತದ ನಾಗರಿಕರ ಪೌರತ್ವಕ್ಕೆ ಧಕ್ಕೆಯಾಗಲಿದೆ ಎಂಬುದನ್ನು ಅವರು ಸಾಬೀತುಪಡಿಸಲಿ’ ಎಂದು ಚಾಲೆಂಜ್‌ ಮಾಡಿದರು.

ವಿರೋಧಿಗಳೆಲ್ಲಾ ಧೂಳಿಪಟ: ಸಂಕ್ರಾಂತಿಗೆ ಮೋದಿ, ಶಾ ಗಾಳಿಪಟ!

ಇದೇ ವೇಳೆ ದಿಲ್ಲಿಯ ಜವಾಹರಲಾಲ್‌ ನೆಹರು ವಿವಿಯಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ‘ಕೆಲವು ವಿದ್ಯಾರ್ಥಿಗಳು ‘ಭಾರತ್‌ ತೇರೆ ಟುಕಡೇ ಟುಕಡೇ ಹೋಂಗೆ ಏಕ್‌ ಹಜಾರ್‌, ಇನ್ಷಾಅಲ್ಲಾ, ಇನ್ಷಾಅಲ್ಲಾ’ (ಭಾರತವೇ ನೀನು 1000 ತುಂಡುಗಳಾಗುವೆ, ಇನ್ಷಾಅಲ್ಲಾ) ಎಂದು ಘೋಷಣೆ ಕೂಗುತ್ತಿದ್ದಾರೆ. ಇಂಥವರನ್ನು ರಕ್ಷಿಸಿ ಎಂದು ರಾಹುಲ್‌ ಬಾಬಾ (ರಾಹುಲ್‌ ಗಾಂಧಿ) ಹಾಗೂ ಕೇಜ್ರಿವಾಲ್‌ ಮೊರೆ ಇಡುತ್ತಿದ್ದಾರೆ. ಅವರೇನು ನಿಮ್ಮ ಸೋದರ ಸಂಬಂಧಿಗಳಾ? ಇಂಥವರನ್ನು ಜೈಲು ಕಂಬಿಗಳ ಹಿಂದೆ ಇಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

4 ತಿಂಗಳಲ್ಲಿ ರಾಮಮಂದಿರ: ಶಾ

‘4 ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುನರುಚ್ಚರಿಸಿದರು.

‘ರಾಮಮಂದಿರ ಎಷ್ಟುದೊಡ್ಡದಾಗಿ ಇರುತ್ತದೆ ಎಂದರೆ ಆ ಕಟ್ಟಡ ಮುಗಿಲೆತ್ತರಕ್ಕೆ ತಲುಪಲಿದೆ’ ಎಂದು ಇಲ್ಲಿ ನಡೆದ ಬಿಜೆಪಿ ರಾರ‍ಯಲಿಯಲ್ಲಿ ಭಾನುವಾರ ಅವರು ನುಡಿದರು.