ನವದೆಹಲಿ(ನ.14): ಲೇಹ್‌ ನಕ್ಷೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಟ್ವೀಟರ್‌ಗೆ ನೋಟಿಸ್‌ ನೀಡಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟ್ವೀಟರ್‌ ಖಾತೆ ಗುರುವಾರ ಕೆಲ ಕಾಲ ಲಾಕ್‌ ಆಗಿತ್ತು.

ಅಮಿತ್‌ ಶಾ ಅವರ ಪ್ರೊಫೈಲ್‌ ಚಿತ್ರದ ಹಕ್ಕುಸ್ವಾಮ್ಯವನ್ನು ತಾವು ಹೊಂದಿರುವುದಾಗಿ ವ್ಯಕ್ತಿಯೊಬ್ಬರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಡಿಸ್‌ಪ್ಲೇ ಚಿತ್ರವನ್ನು ಟ್ವೀಟರ್‌ ತೆಗೆದುಹಾಕಿತ್ತು. ಇದರ ಜತೆಗೆ ಎಡವಟ್ಟಿಂದ ಶಾ ಅವರ ಟ್ವೀಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್‌ ಮಾಡಲಾಗಿತ್ತು. ತತ್‌ಕ್ಷಣವೇ ಈ ದೋಷವನ್ನು ಸರಿಪಡಿಸಲಾಯಿತು. ಸದ್ಯ ಶಾ ಖಾತೆಯು ಸಕ್ರಿಯವಾಗಿದೆ ಎಂದು ಸ್ಪಷ್ಟನೆ ನೀಡಿದೆ.

‘ಪ್ರಮಾದದಿಂದಾಗಿ ಜಾಗತಿಕ ಹಕ್ಕುಸ್ವಾಮ್ಯ ನೀತಿಗಳ ಅಡಿಯಲ್ಲಿ ಅಮಿತ್‌ ಶಾ ಅವರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್‌ ಮಾಡಿದ್ದೆವು. ಆದರೆ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಲಾಗಿದೆ’ ಎಂದು ಟ್ವೀಟರ್‌ ವಕ್ತಾರರು ತಿಳಿಸಿದ್ದಾರೆ. ಅಮಿತ್‌ ಶಾ ಅವರಿಗೆ ಟ್ವೀಟರ್‌ನಲ್ಲಿ 2.36 ಕೋಟಿ ಹಿಂಬಾಲಕರಿದ್ದಾರೆ.