ನವದೆಹಲಿ(ಜೂ.21): ಭಾರತ-ಚೀನಾ ಗಡಿ ಸಂಘರ್ಷದ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರುದ್ಧ ಲಡಾಖ್‌ ಗಡಿ ಸಂಘರ್ಷದಲ್ಲಿ ತೀವ್ರ ಗಾಯಗೊಂಡಿರುವ ಯೋಧನೊಬ್ಬನ ವೃದ್ಧ ತಂದೆಯ ವಿಡಿಯೋವನ್ನು ಟ್ವೀಟ್‌ ಮಾಡಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟಾಂಗ್‌ ನೀಡಿದ್ದಾರೆ.

ವಿಡಿಯೋದಲ್ಲಿ ಯೋಧನ ತಂದೆ, ‘ಚೀನಾವನ್ನು ಎದುರಿಸುವಲ್ಲಿ ಭಾರತ ಸೇನೆ ಸಶಕ್ತವಾಗಿದೆ. ರಾಹುಲ್‌ ಗಾಂಧಿ ಅವರೇ ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ. ನನ್ನ ಮಗ ಸೇನೆಯಲ್ಲಿ ಹೋರಾಡಿದ್ದಾನೆ, ಮುಂದೆಯೂ ಹೋರಾಡಲಿದ್ದಾನೆ’ ಎಂದಿದ್ದಾರೆ.

ಈ ವಿಡಿಯೋವನ್ನು ಟ್ವೀಟ್‌ ಮಾಡಿರುವ ಶಾ, ‘ಯೋಧನ ತಂದೆ ರಾಹುಲ್‌ ಗಾಂಧಿ ಅವರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಅವರು ಕ್ಷುಲ್ಲಕ ರಾಜಕೀಯವನ್ನು ಬಿಟ್ಟು, ದೇಶದ ಹಿತಾಸಕ್ತಿ ವಿಚಾರದಲ್ಲಿ ಒಗ್ಗಟ್ಟಾಗಿ ನಿಲ್ಲಲಿ’ ಎಂದು ವಾಗ್ದಾಳಿ ನಡೆಸಿದ್ದಾರೆ.