ನನ್ನನ್ನು ಕೊಲ್ಲಲು ಅಮಿತ್ ಶಾ ಸಂಚು: ಮಮತಾ| ‘ರ‍್ಯಾಲಿಗಳಿಗೆ ಜನ ಬಾರದಿರುವುದು ನೋಡಿ ಶಾ ವಿಚಲಿತ’
ಮೆಜಿಯಾ(ಮಾ.17): ತಮ್ಮ ಪ್ರಚಾರ ರಾರಯಲಿಗಳಿಗೆ ಜನರು ಬಾರದಿರುವುದರಿಂದ ವಿಚಲಿತರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಟಿಎಂಸಿ ನಾಯಕರ ವಿರುದ್ಧ ಷಡ್ಯಂತ್ರ ರೂಪಿಸಿ ಕಿರುಕುಳ ನೀಡುತ್ತಿದ್ದಾರೆ. ತಮ್ಮನ್ನು ಕೊಲ್ಲುವುದಕ್ಕೂ ಸಂಚು ರೂಪಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
‘ನನ್ನ ಮೇಲೆ ನಂದಿಗ್ರಾಮದಲ್ಲಿ ದಾಳಿ ನಡೆಯಿತು. ಆದರೆ, ಬಿಜೆಪಿ ವಿರುದ್ಧದ ನನ್ನ ಹೋರಾಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅಮಿತ್ ಶಾ ತಮ್ಮ ರಾರಯಲಿಗಳಿಗೆ ಜನರು ಬಾರದಿರುವುದನ್ನು ನೋಡಿ ವಿಚಲಿತರಾಗಿದ್ದಾರೆ. ಅವರು ದೇಶ ನಡೆಸುವುದನ್ನು ಬಿಟ್ಟು ಕೋಲ್ಕತಾದಲ್ಲಿ ಕುಳಿತು ಟಿಎಂಸಿ ನಾಯಕರಿಗೆ ಕಿರುಕುಳ ನೀಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಅವರಿಗೆ ಬೇಕಿರುವುದು ಏನು? ನನ್ನನ್ನು ಕೊಲ್ಲಲು ಹೊರಟಿದ್ದಾರೆಯೇ? ನನ್ನನ್ನು ಕೊಂದು ಚುನಾವಣೆ ಗೆಲ್ಲುತ್ತೇವೆಂದು ಭಾವಿಸಿದ್ದಾರೆಯೇ? ಅವರದು ತಪ್ಪು ಕಲ್ಪನೆ’ ಎಂದು ಇಲ್ಲಿನ ಪ್ರಚಾರ ರಾರಯಲಿಯಲ್ಲಿ ಮಮತಾ ಮಂಗಳವಾರ ಗುಡುಗಿದರು.
ಚುನಾವಣಾ ಆಯೋಗ ಸ್ವಾತಂತ್ರ್ಯ ಕಳೆದುಕೊಂಡು ಅಮಿತ್ ಶಾ ಅವರ ಇಶಾರೆಯಂತೆ ಕೆಲಸ ಮಾಡುತ್ತಿದೆ. ನನ್ನ ಭದ್ರತಾ ನಿರ್ದೇಶಕರನ್ನು ಅಮಿತ್ ಶಾ ನಿರ್ದೇಶನದಂತೆ ಕಿತ್ತುಹಾಕಿದ್ದಾರೆ. ಸೋಮವಾರ ರಾತ್ರಿ ಗುವಾಹಟಿಯಿಂದ ಆಗಮಿಸಿದ ಶಾ ಬಿಜೆಪಿ ರಾಜ್ಯ ನಾಯಕರ ಜೊತೆಗೆ ಸರಣಿ ಸಭೆ ನಡೆಸಿ ಷಡ್ಯಂತ್ರಗಳನ್ನು ಹೆಣೆದಿದ್ದಾರೆ. ತಮ್ಮ ರಾರಯಲಿಗಳಿಗೆ ಜನರು ಬಾರದಿರುವುದನ್ನು ನೋಡಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ ಎಂದೂ ಮಮತಾ ಆರೋಪಿಸಿದ್ದಾರೆ.
